ಕಾಸರಗೋಡು: ರಾತ್ರಿ ವೇಳೆ ಪೆಟ್ರೋಲಿಂಗ್ ನಡೆಸುತ್ತಿದ್ದ ಬೇಡಡ್ಕ ಪೊಲೀಸ್ ಠಾಣೆ ಜೀಪಿಗೆ ಆಲ್ಟೋ ಕಾರಿನಲ್ಲಿ ಆಗಮಿಸಿದ ತಂಡವೊಂದು ಮೂರು ಬಾರಿ ಡಿಕ್ಕಿಯಾಗಿಸಿ, ಮಗುಚಿಹಾಕಿ ಪರಾರಿಯಾಗಿದೆ. ಘಟನೆಯಿಂದ ಜೀಪು ಚಾಲಕ ರಾಕೇಶ್ ಎಂಬವರ ಕೈಗೆ ಗಂಭೀರ ಗಾಯಗಳುಂಟಾಗಿದೆ. ಪರಾರಿಯಾಗಿರುವ ಕಾರನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.
ಗುರುವಾರ ರಾತ್ರಿ ಎಎಸ್‍ಐ ನೇತೃತ್ವದಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸ್ ವಾಹನ ಪಳ್ಳತ್ತುಂಗಾಲ್ ಬಳಿ ಆಗಮಿಸಿದ ಆಲ್ಟೋ ಕಾರಿಗೆ ಸೂಚನೆ ನೀಡಿದರೂ ನಿಲ್ಲಿಸದೆ ಪರಾರಿಯಾಗಲೆತ್ನಿಸಿದಾಗ ಪೊಲೀಸರು ಹಿಂಬಾಲಿಸಿದ್ದಾರೆ. ಕುತ್ತಿಕ್ಕೋಲ್ ತಲುಪುತ್ತಿದ್ದಂತೆ ಕಾರನ್ನು ಹಿಂದಿಕ್ಕಿದ ಪೊಲೀಸ್ ವಾಹನ ಅಲ್ಪ ಮುಂದೆ ಸಾಗಿ ಕಾರನ್ನು ನಿಲ್ಲಿಸಲು ಯತ್ನಿಸುತ್ತಿದ್ದಂತೆ ಕಾರಿನಿಂದ ಜೀಪಿಗೆ ಡಿಕ್ಕಿ ಹೊಡೆಸಿ, ಅಲ್ಲಿಂದ ಮುಂದಕ್ಕೆ ಸಾಗಿದೆ. ಬಂದಡ್ಕ ವರೆಗೂ ಹಿಂಬಾಲಿಸಿದಾಗ ಕಾರು ಕುತ್ತಿಕ್ಕೋಲ್ ಹಾದಿಯಾಗಿ ಪಳ್ಳತ್ತುಂಗಾಲ್ ಮೂಲಕ ಚುಳ್ಳಿಕ್ಕರ ಭಾಗಕ್ಕೆ ತೆರಳಿದ್ದು, ಪೊಲೀಸರು ಹಿಂಬಾಲಿಸುತ್ತಿದ್ದಂತೆ ಕಾರಿನಿಂದ ಮತ್ತೆ ಡಿಕ್ಕಿಯಾಗಿಸಿದ ಪರಿಣಾಮ ಪೊಲೀಸ್ ಜೀಪು ಮಗುಚಿ ಬಿದ್ದಿದೆ. ಕಾರಿನಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ಹೊರತು ಯುವತಿಯಿದ್ದಳೆನ್ನಲಾಗಿದೆ. ಕಾರಿನ ನಂಬರ್ ಕೇಂದ್ರೀಕರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




