ಉಪ್ಪಳ: ಪೈವಳಿಕೆ ಪಂಚಾಯಿತಿ ಬಲಿಪಗುರಿ ಮೇಗಿನಪಂಜದ ತನ್ನ ಪತ್ನಿ ಮನೆಗೆ ಆಗಮಿಸಿದ್ದ ಯುವಕ,ನ ಮೃತದೇಹ ಮನೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳ್ತಂಗಡಿ, ದಿಡುಪೆ ಸಿಂಗನಾರ್ ನಿವಾಸಿ ಎಸ್.ಕೆ ಸುರೇಶ್(34) ನೇಣಿಗೆ ಶರಣಾದ ವ್ಯಕ್ತಿ.
ಸುರೇಶ್ ಎರಡು ದಿವಸಗಳ ಹಿಂದೆ ಪತ್ನಿ ರಾಜೇಶ್ವರಿ ಅವರ ಮನೆಗೆ ಆಗಮಿಸಿದ್ದು, ಭಾನುವಾರ ಮಧ್ಯಾಹ್ನ ಕೊಠಡಿಯೊಳಗೆ ತೆರಳಿದವರು ಬಹಳ ಹೊತ್ತಿನ ವರೆಗೂ ವಾಪಸಾಗದ ಹಿನ್ನೆಲೆಯಲ್ಲಿ ಮನೆಯವರು ಕರೆದರೂಸ್ಪಂದಿಸಿರಲಿಲ್ಲ. ಮುಚ್ಚಿದ ಸ್ಥಿತಿಯಲ್ಲಿದ್ದ ಬಾಗಿಲು ಒಡೆದುನೋಡಿದಾಗ ನೇಣಿಗೆ ಶರಣಾಗಿರುವುದು ಕಂಡುಬಂದಿತ್ತು. ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರೂ, ಪ್ರಯೋಜನವಾಗಿರಲಿಲ್ಲ. ರಾಜೇಶ್ವರೀ ಹೆರಿಗೆಗಾಗಿ ತವರಿಗೆ ಬಂದಿದ್ದು, ಸಣ್ಣ ಮಗುವಿನ ಆರೈಕೆಯಲ್ಲಿರುವ ಮಧ್ಯೆ ಸುರೇಶ್ ಮನೆಗೆ ಆಗಮಿಸಿ ಕೃತ್ಯವೆಸಗಿದ್ದಾನೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




