ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ನೀರ್ಚಾಲು-ಸಾಯಿಮಂದಿರ-ಮುಗು ರಸ್ತೆ ಹಾಗೂ ಉರುಳಿತ್ತಡ್ಕ(ಪಾಡ್ಲಡ್ಕ)-ಬೇಳ ರಸ್ತೆಯು ಅಲ್ಲಲ್ಲಿ ಹೊಂಡಗಳಿಂದ ಕೂಡಿದ್ದು ಶೋಚನೀಯ ಸ್ಥಿತಿಯಲ್ಲಿದೆ. 17 ವರ್ಷಗಳ ಹಿಂದೆ ಈ ರಸ್ತೆಯನ್ನು ಬದಿಯಡ್ಕ ಗ್ರಾಮಪಂಚಾಯಿತಿಯು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿತ್ತು. ಆದರೆ ಮುಂದೆ ಯಾವುದೇ ಕಾಮಗಾರಿಯು ನಡೆಯದಿರುವುದೇ ಈ ರಸ್ತೆಯ ದುಃಸ್ಥಿತಿಗೆ ಕಾರಣವಾಗಿದೆ.
2 ವರ್ಷಗಳ ಹಿಂದೆ ದುರಸ್ತಿ ಕಾರ್ಯವನ್ನು ನಡೆಸಿದ್ದರೂ ಇದೀಗ ರಸ್ತೆಯು ಸಂಚಾರಕ್ಕೆ ಅಯೋಗ್ಯ ಸ್ಥಿತಿಯಲ್ಲಿದೆ. ನೀರ್ಚಾಲು ಕಿಳಿಂಗಾರು ಸಾಯಿಮಂದಿರ, ಮುಗುರಸ್ತೆಯು ತೀರಾ ಹದಗೆಟ್ಟಿದೆ. ಕಿಳಿಂಗಾರು ಶಾಲೆಯಿಂದ ಮುಗು ರಸ್ತೆಯ ಅಲ್ಲಲ್ಲಿ ಡಾಮರು ಕಿತ್ತುಹೋಗಿ ಸಮಸ್ಯೆಯಾಗಿದೆ. ದಿನನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಕಿಳಿಂಗಾರು ಶಾಲೆ, ನೀರ್ಚಾಲು ಶಾಲೆಗೆ ಈ ಭಾಗದ ಅನೇಕ ಮಕ್ಕಳು ನಿತ್ಯ ಸಂಚರಿಸುತ್ತಾರೆ. ನೀರ್ಚಾಲಿನಿಂದ ಪೈವಳಿಕೆ, ಪೆರ್ಮುದೆ ಭಾಗಕ್ಕೆ ತೆರಳಲು ಇದು ಹತ್ತಿರದ ದಾರಿಯಾಗಿದೆ.
ಸಮಾರಂಭಗಳಿಗೆ ನೆರವಾಗುವ ಸಭಾ ಭವನ, ಪಶು ಆರೋಗ್ಯ ಕೇಂದ್ರ, ಈ ರಸ್ತೆಯಲ್ಲಿದೆ. ಜೊತೆಗೆ ಅಡಕೆ, ತೆಂಗು-ಬಾಳೆ ಬೆಳೆಸುವ ಬೃಹತ್ ಕೃಷಿ ಭೂಮಿಗಳೂ ಈ ವ್ಯಾಪ್ತಿಯಲ್ಲಿ ನಿಬಿಡವಾಗಿದ್ದು ವಸ್ತುಗಳ ರವಾನೆಗೆ ಭಾರೀ ತೊಡಕು ಕೃಷಿಕರನ್ನು ಹೈರಾಣಗೊಳಿಸಿದೆ. ವಿವಿಧ ಕಡೆಗಳಿಗೆ ತಮ್ಮ ಅಗತ್ಯ ಕೆಲಸಗಳಿಗೂ ತೆರಳುವ ಸಂದರ್ಭ ಈ ರಸ್ತೆಯ ಶೋಚನೀಯಾವಸ್ಥೆಯು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಅಧಿಕೃತರು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಹೊಸ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಅಭಿಮತ:
-17 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾದ ಈ ರಸ್ತೆಯು ಇಂದು ತೀರಾ ಹದಗೆಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಈ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸಬೇಕು. ಕಿಳಿಂಗಾರು ಶಾಲೆಯಿಂದ ಮುಗು ತನಕ ಹೊಸತಾಗಿ ಡಾಮರೀಕರಣವಾಗಬೇಕಿದೆ.
- ಸಾಯಿರಾಂ ಕೆ.ಎನ್.ಕೃಷ್ಣ ಭಟ್, ಬದಿಯಡ್ಕ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರು.




.jpg)
