ಬದಿಯಡ್ಕ : ಸಮಾಜ ಸುಧಾರಣೆಯಾಗಬೇಕಾದರೆ ಸುಮನಸ್ಸುಳ್ಳ ಜನರು ಬೇಕು. ಸುಮನಸ್ಸುಳ್ಳವರು ಒಗ್ಗೂಡಿದಾಗ ಹಲವನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಒಗ್ಗೂಡಿ ಮರಾಠಿ ಸಮಾಜ ಮೀಸಲಾತಿಯನ್ನು ಮರಳಿ ಪಡೆದ ಸಂತಸವನ್ನು ಸಂಭ್ರಮಿಸುವ ದಿನವೇ ಮರಾಠಿ ದಿನ. ಇದನ್ನು ಕೇರಳ ಮರಾಠಿ ಸಂರಕ್ಷಣಾ ಸಮಿತಿ ಆಚರಿಸುವುದರೊಂದಿಗೆ ಮೀಸಲಾತಿಯ ಉದ್ದೇಶ ಮತ್ತು ಗುರಿ ಸಾಧಿಸಬೇಕಾದ ವಿಷಯಗಳ ಬಗ್ಗೆ ನೂತನ ಪೀಳಿಗೆಗೆ ನೆನಪಿಸುತ್ತಾ ಬರುತ್ತಿದ್ದಾರೆ ಎಂದು ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ನಾರಾಯಣ ನಾಯ್ಕ್ ಹೇಳಿದರು.
ಮರಾಠಿ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಬದಿಯಡ್ಕ ಸಮೀಪದ ಪಿಲಾಂಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮರಾಠಿ ಸಭಾಭವನದಲ್ಲಿ ಶನಿವಾರ ನಡೆದ ಮರಾಠಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮರಾಠಿ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಎಸ್.ಪಿ. ಹರಿಶ್ಚಂದ್ರ ನಾಯ್ಕ್, ಸುಬ್ರಾಯ ನಾಯ್ಕ್, ವಿಶ್ವನಾಥ ನಾಯ್ಕ್, ಸೀತಾರಾಮ ನಾಯ್ಕ್, ರಾಮ ನಾಯ್ಕ್ ಅಡೂರು, ಲಕ್ಷ್ಮಣ ದೇಲಂಪಾಡಿ, ಜಯಶ್ರೀ ಚುಕ್ಕಿನಡ್ಕ, ಗೋಪಾಲ, ರಾಧಾಕೃಷ್ಣ ನಾಯ್ಕ್ ಪೈಕ, ಹರೀಶ್ ಕುಮಾರ್ ಚೇರಾಲು, ನಾರಾಯಣ ನಾಯ್ಕ್ ಹಾಗೂ ಸಂಘಟನೆಯ ಪೆರ್ಲ, ಅಡೂರು, ಬದಿಯಡ್ಕ, ಚೆಂಗಳ, ಮಧೂರು, ಪೈವಳಿಕೆ ಪಂಚಾಯತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೇರಳ ಮರಾಠಿ ಸಂಘದ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಸ್ವಾಗತಿಸಿ, ಕೋಶಾಧಿಕಾರಿ ಮಾಯಿಲ ನಾಯ್ಕ್ ವಂದಿಸಿದರು. ಚಂದ್ರಶೇಖರ ಏತಡ್ಕ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಮುಂಚಿತವಾಗಿ ಮಾಜಿ ಯೋಧ ಕೃಷ್ಣ ನಾಯ್ಕ್ ಧ್ವಜಾರೋಹಣ ನಡೆಸಿ ಮರಾಠಿ ದಿನಾಚರಣೆ ಉದ್ದೇಶವನ್ನು ವಿವರಿಸಿದರು.




.jpg)
.jpg)
