ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಸೆಪ್ಟೆಂಬರ್ 17 ರಿಂದ ಆಯೋಜಿಸುತ್ತಿರುವ ಸೇವಾ ಪಾಕ್ಷಿಕ'ದ ಅಂಗವಾಗಿ ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಕಾಸರಗೋಡಿನಲ್ಲಿ ಜರುಗಿತು.
ಕಾಸರಗೋಡು ಜನರಲ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಂ.ಎಲ್. ಅಶ್ವಿನಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಒಂದು ಯೂನಿಟ್ ರಕ್ತದಿಂದ ಒಂದು ಜೀವ ಉಳಿಸಲು ಸಾಧ್ಯವಾಗುವುದರ ಜತೆಗೆ ರಕ್ತದಾನಿಗಳ ಆರೋಗ್ಯವನ್ನೂ ಸುಧಾರಿಸಿಕೊಳ್ಳಲು ಸಾಧ್ಯ. ಇದಕ್ಕಾಗಿ ರಕ್ತದಾನ ಮಾಡಲು ಯುವಕ, ಯುವತಿಯರು ಮುಂದೆ ಬರಬೇಕು ಎಂದು ತಿಳಿಸಿದರು.
ಯುವ ಮೋರ್ಚಾ ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ ಅಶ್ವಿನ್ ಅಧ್ಯಕ್ಷತೆ ವಹಿಸಿದ್ದರು. ಪಿ.ಎಂ. ಸುಹೈಲ್, ವಕೀಲ ಧನುಷ್ ಎಚ್.ಎನ್ ಉಪಸ್ಥಿತರಿದ್ದರು. ಅಕ್ಟೋಬರ್ 2 ರೊಳಗೆ ಕನಿಷ್ಠ 100 ಜನರಿಂದ ರಕ್ತದಾನ ಮಾಡಿಸುವ ಗುರಿಯನ್ನು ಯುವ ಮೋರ್ಚಾ ಹೊಂದಿರುವುದಾಗಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಕೆ. ಅಶ್ವಿನ್ ತಿಳಿಸಿದ್ದಾರೆ.





