ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಆಶ್ರಯದಲ್ಲಿ, ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ, ಮಂಗಳೂರು ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಮಂಗಳೂರು ಇವರ ಸಹಯೋಗದೊಂದಿಗೆ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಮಣಿಪಾಲದ ಕೆ. ಎಂ. ಸಿ. ಆಸ್ಪತ್ರೆಯ ಮಕ್ಕಳ ರೋಗ ತಜ್ಞ ಡಾ. ಸುನಿಲ್ ಮುಂಡ್ಕೂರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಬದಲಾದ ಕಾಲಘಟ್ಟದಲ್ಲಿನಿರಂತರ ಆರೋಗ್ಯ ತಪಾಸಣೆಯೊಂದಿಗೆ ವ್ಯಾಯಾಮದಿಂದ ಕೂಡಿದ ಜೀವನಕ್ಕೆ ಜನರು ಆದ್ಯತೆ ನೀಡಬೇಕು. ಗ್ರಾಮೀಣ ಪ್ರದೇಶದ ಜನತೆಗೆ ಇಂತಹ ಆರೋಗ್ಯ ತಪಾಸಣಾ ಶಿಬಿರ ಹೆಚ್ಚು ಸಹಕಾರಿಯಾಗಿದ್ದು, ಯಕ್ಷಗಾನದ ಪ್ರಧಾನ ಕೇಂದ್ರವಾಗಿರುವಂತಹ ಸಿರಿಬಾಗಿಲು ಪ್ರತಿಷ್ಠಾನ ಈ ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕೆ.ಎಂ.ಸಿ.ಆಸ್ಪತ್ರೆಯ ತಜ್ಞ ವೈದ್ಯ, ಕನ್ಸಲೆಂಟ್ ಅಂಕಾಲಜಿಸ್ಟ್ ಡಾ. ಜೋಹಾನ್ ಸನ್ನಿ, ಇವರು ಕ್ಯಾನ್ಸರ್ ರೋಗದ ಲಕ್ಷಣಗಳು, ರೋಗದ ಬಗ್ಗೆ ವಹಿಸಬೇಕಾದ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಿದರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ವಲಯ ಮೇಲ್ವಿಚಾರಕ ಗೋಪಾಲಕೃಷ್ಣ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಉಪಸ್ಥಿತರಿದ್ದರು. ಕೆ. ಎಂ. ಸಿ. ಆಸ್ಪತ್ರೆ ಅತ್ತಾವರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಉದಯ ಜೆ, ಮಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಕಾಸರಗೋಡು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಷ್ಣುಪ್ರಸಾದ್, ರಂಜನ್ ಶಿಬಿರಕ್ಕೆ ನೇತೃತ್ವ ನೀಡಿದರು. 150ಕ್ಕೂ ಹೆಚ್ಚುಮಂದಿ ಶಿಬಿರದ ಪ್ರಯೋಜನ ಪಡೆದುಕೊಮಡರು. ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಶಿಬಿರಾರ್ಥಿಗಳಿಗೆ ಉಚಿತ ಔಷಧ ವಿತರಣೆಯನ್ನು ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಕಾಸರಗೋಡು ವಲಯ, ಎಫ್. ಎಚ್. ಸಿ. ಮಧೂರು ,ಕುತ್ಯಾಳ ನವ ಜೀವನ ಸಮಿತಿ ಕೂಡ್ಲು,ಶ್ರೀ ಮಹೇಶ್ವರಿ ಮಹಿಳಾ ಮಂಡಲ ಪುಳ್ಕೂರು ಸಿರಿಬಾಗಿಲು, ಶಿವನಾರಾಯಣ ವಾಟ್ಸಪ್ ಬಳಗ ಸಹಕಾರ ನೀಡಿದರು. ಪ್ರತಿಷ್ಠಾನದ ಅದ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಶ್ರೀರಾಜ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಕೆ. ಕೂಡ್ಲು ವಂದಿಸಿದರು.





