ಕಾಸರಗೋಡು: ವಾರಂಟ್ ಅನ್ವಯ ಕಳವು ಪ್ರಕರಣದ ಆರೋಪಿಯೊಬ್ಬನನ್ನು ಸೆರೆಹಿಡಿಯಲು ಆಗಮಿಸಿದ್ದ ಪೊಲೀಸರ ಮೇಲೆ ಆರೋಪಿ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ ಘಟನೆ ಬೇಕಲ ಪೆಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಂಡ ನಡೆಸಿದ ಹಲ್ಲೆಯಿಂದ ಮಲ್ಪೆ ಠಾಣೆಯ ಇಬ್ಬರು ಹಾಗೂ ಬೇಕಲ ಠಾಣೆ ಒಬ್ಬ ಪೊಲೀಸ್ ಗಾಯಗೊಂಡಿದ್ದು, ನಂತರ ಚಿಕಿತ್ಸೆ ಪಡೆದಿದ್ದಾರೆ. ಮಲ್ಪೆ ಪೊಲೀಸ್ ಠಾಣೆ ಎಎಸ್‍ಐ ಹರೀಶ್, ಹೆಡ್‍ಕಾನ್‍ಸ್ಟೇಬಲ್ ಇ. ಲೋಕೇಶ್ ಹಾಗೂ ಇವರಿಗೆ ಸಹಾಯಕನಾಗಿ ಆಗಮಿಸಿದ್ದ ಬೇಕಲ ಠಾಣೆ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ವಿ.ಎಂ ಪ್ರಸಾದ್ ಕುಮಾರ್ ಹಲ್ಲೆಗೀಡಾದವರು.
ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನೆಯಾಲ್ ಪೆರುಂಬಾದ ಎ.ಎಚ್ ಹಾಶಿಂ ಎಂಬಾತನ ವಿರುದ್ಧ ವಾರಂಟ್ ಹೊರಡಿಸಿದ್ದ ಹಿನ್ನೆಲೆಯಲ್ಲಿ ಈತನನ್ನು ಸೆರೆಹಿಡಿಯಲು ಬುಧವಾರ ಪೊಲೀಸರ ತಂಡ ಪೆರಿಯಾಟಡ್ಕದ ಮಸೀದಿ ಸನಿಹ ಆಗಮಿಸಿದಾಗ ಹಾಶಿಂ ಹಾಗೂ ಈತನ ಐದು ಮಂದಿ ಸಹಚರರು ಪೊಲೀಸರ ಮೇಲೆ ಆಕ್ರಮಣ ನಡೆಸಿರುವುದಾಗಿ ದೂರಲಾಗಿದೆ. ತಂಡದ ಪ್ರತಿಭಟನೆ ನಡುವೆಯೂ ಪೊಲೀಸರು ಕಾರ್ಯಾಚರಣೆ ನಡೆಸಿ, ಹಾಶಿಂನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡಚಣೆ, ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್‍ಗಳಲ್ಲಾಗಿ ಹಾಶಿಂ ಸೇರಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




