ತಿರುವನಂತಪುರಂ: ಕೇರಳ ಸರಕಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (UGC) ಕರಡು ಪಠ್ಯಕ್ರಮವನ್ನು ತಿರಸ್ಕರಿಸಿದೆ. ಭಾರತೀಯ ಜ್ಞಾನ ವ್ಯವಸ್ಥೆ ಹೆಸರಿನಲ್ಲಿ ನಿರ್ದಿಷ್ಟ ಸಿದ್ದಾಂತದ ವಿಷಯಗಳನ್ನು ಹೇರಲು ಯತ್ನಿಸಲಾಗಿದೆ ಎಂದು ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ UGC 9 ವಿಷಯಗಳ ಕರಡು ಪಠ್ಯಕ್ರಮವನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಅಭಿಪ್ರಾಯ ಕೋರಿತ್ತು.
ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು, UGC ಕರಡು ಪಠ್ಯಕ್ರಮವನ್ನು ಅವೈಜ್ಞಾನಿಕವಾದುದು, ಸೈದ್ಧಾಂತಿಕ ಹಿತಾಸಕ್ತಿಗಳ ಪರವಾಗಿದೆ ಎಂದು ಟೀಕಿಸಿದ್ದಾರೆ.
'ರಾಮ ರಾಜ್ಯ'ದಂತಹ ವಿಷಯಗಳು-ಅಂದರೆ, ಹಿಂದೂ ದೇವರು ರಾಮನ ಆದರ್ಶಪ್ರಾಯ ಆಡಳಿತ ಎಂಬ ವಿಷಯವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಮತ್ತು ಪರಿಸರ, ಸಾಮಾಜಿಕ ಹಾಗೂ ಆಡಳಿತ (ಇಎಸ್‌ಜಿ) ವಿಷಯಗಳ ಜೊತೆ ಸೇರಿಸಿರುವುದು ಸಂಘ ಪರಿವಾರದ ಸಿದ್ದಾಂತ ಹೇರಿಕೆಗೆ ಉದಾಹರಣೆ. ಇಂತಹ ವಿಷಯಗಳು ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಸಹಿಷ್ಣುತೆ ಮತ್ತು ಅಶಾಂತಿಗೆ ಕಾರಣವಾಗಬಹುದು ಎಂದು ಬಿಂದು ತಿಳಿಸಿದ್ದಾರೆ.
ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಅಧ್ಯಕ್ಷತೆಯ ಕೇರಳ ರಾಜ್ಯ ಸರಕಾರದ ಸಮಿತಿಯು, ಯುಜಿಸಿಯ ಪ್ರಸ್ತಾವಿತ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ನೀತಿಯು ವಿಶ್ವವಿದ್ಯಾಲಯ ಶಿಕ್ಷಣದಿಂದ ನಿರೀಕ್ಷಿಸಲಾದ ಬೌದ್ಧಿಕ ಮತ್ತು ಶಿಸ್ತಿನ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ ಎಂದು ಹೇಳಿದೆ.
ರಾಜ್ಯ ಸರಕಾರದ ಸಮಿತಿಯಲ್ಲಿ ಇತಿಹಾಸಕಾರ ರೊಮಿಲಾ ಥಾಪರ್ ಮತ್ತು ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ರಾಜನ್ ಗುರುಕ್ಕಲ್ ಇದ್ದರು. ಈ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ವಿವರವಾದ ಆಕ್ಪೇಪವನ್ನು ಸಲ್ಲಿಸಲಾಗಿದ್ದು, ಈ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಕೇರಳ ಸರಕಾರ ತಿಳಿಸಿದೆ ಎಂದು ವರದಿಯಾಗಿದೆ.




