ಕಾಸರಗೋಡು: ಜನಸಾಮಾನ್ಯರು ಕಂಡಿರುವ ಭವ್ಯ ಭಾರತದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ನಿರ್ಮಿಸಲಾಗುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಸಿ.ಕೆ. ಪದ್ಮನಾಭನ್ ತಿಳಿಸಿದ್ದಾರೆ.
ಅವರು ಬಿಜೆಪಿ ಉದುಮ ಪರಿಯಾರಂ ಬೂತ್ ಸಮಿತಿಯಿಂದ ಸ್ವರ್ಗೀಯ ಪಿ.ವಿ. ಕುಮಾರನ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಸಾಮಾನ್ಯ ಕಾರ್ಮಿಕರ ರಾಜಕೀಯ ಚಳುವಳಿಯಾಗಿರುವ ಬಿಜೆಪಿ, ನಿರ್ಣಾಯಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಸಿಪಿಎಂ ನೇತೃತ್ವದ ಎಡರಂಗ ಸರ್ಕಾರ ಅಯ್ಯಪ್ಪ ಸಂಗಮವನ್ನು ಭಕ್ತಿ ಅಥವಾ ಆಚರಣೆಯ ಭಾಗವಾಗಿ ಆಯೋಜಿಸಲಿಲ್ಲ, ಬದಲಾಗಿ ಮತಗಳನ್ನು ಗಳಿಸಲು ಅದು ಜನರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಯ್ಯಪ್ಪನನ್ನು ಆಶ್ರಯಿಸಿದರೆ ಮಾತ್ರ ಅಧಿಕಾರ ಸಿಗುತ್ತದೆ ಎಂದು ಭಾವಿಸಿ ಸಿಪಿಎಂ ತನ್ನ ಸಿದ್ಧಾಂತಗಳನ್ನು ತ್ಯಜಿಸಲೂ ಸಿದ್ಧವಾಗಿದೆ ಎಂದು ತಿಳಿಸಿದರು.
ಬಿಜೆಪಿ ಕೋಯಿಕ್ಕೋಡ್ ಪ್ರದೇಶ ಅಧ್ಯಕ್ಷ ವಕೀಲ ಕೆ. ಶ್ರೀಕಾಂತ್ ಸಂಸ್ಮರಣಾ ಭಾಷಣ ಮಾಡಿದರು. ಬಿಜೆಪಿ ಉದುಮ ಪಂಚಾಯತ್ ಅಧ್ಯಕ್ಷ ಮಧುಸೂದನನ್ ಅಡುಕ್ಕತ್ತಬೈಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ತಾಯತ್ತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಕಾರ್ಯದರ್ಶಿ ಪ್ರಮೀಳಾ ಮಜಲ್, ಮಾಧ್ಯಮ ಸಂಚಾಲಕ ವೈ.ಕೃಷ್ಣದಾಸ್, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸುಹೈಲ್ ಕೂಳಿಯಾಂಕಲ್, ಬಿಜೆಪಿ ಉದುಮ ಮಂಡಲದ ಅಧ್ಯಕ್ಷೆ ಶೈನಿಮೋಳ್ ಉಪಸ್ಥಿತರಿದ್ದರು.


