ಗಾಜಾಪಟ್ಟಿ: ಹಮಾಸ್ ಬಂಡುಕೋರರು ಕದನ ವಿರಾಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಇಸ್ರೇಲ್ ಸೇನೆ ಗಾಜಾಪಟ್ಟಿ ಯಲ್ಲಿ ರಾತ್ರೋರಾತ್ರಿ ನಡೆಸಿದ ಭಾರಿ ವಾಯು ದಾಳಿಯಲ್ಲಿ 46 ಮಕ್ಕಳು ಸೇರಿ ಮೃತಪಟ್ಟವರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಂಜೆಯವರೆಗೆ 60 ಮಂದಿ ಮೃತಪಟ್ಟಿದ್ದರು.
ಬುಧವಾರ ಏಳು ಮಹಿಳೆಯರು, ಆರು ಮಕ್ಕಳು ಸೇರಿ 21 ಜನರ ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಸಾವಿನ ಸಂಖ್ಯೆ ಏರಿದೆ ಎಂದು ಗಾಜಾಪಟ್ಟಿಯ ಅಲ್ ಶಿಫಾ ಆಸ್ಪತ್ರೆಯ ನಿರ್ದೇಶಕ ಮಹಮದ್ ಅಬು ಸಲ್ಮಿಯಾ ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಗಂಭೀರ ಗಾಯಗಳೊಂದಿಗೆ 20 ಮಕ್ಕಳು ಸೇರಿ 45 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ 10ರಂದು ಗಾಜಾಪಟ್ಟಿಯಲ್ಲಿ ಕದನ ವಿರಾಮ ಜಾರಿಯಾಗಿತ್ತು. ಆ ನಂತರ ಇಸ್ರೇಲ್ ಸೇನೆ ನೆಡೆಸಿದ ದೊಡ್ಡಮಟ್ಟದ ವಾಯು ದಾಳಿ ಇದಾಗಿದೆ.
ಕದನ ವಿರಾಮ ಮರುಸ್ಥಾಪನೆ: 'ಗಾಜಾಪಟ್ಟಿ ಒಳಗಿನ ಬಂಡುಕೋರರು ಮತ್ತು ಅವರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರವಷ್ಟೇ ಅಲ್ಲಿ ಕದನ ವಿರಾಮ ಮರುಸ್ಥಾಪನೆಗೊಂಡಿತು' ಎಂದು ಇಸ್ರೇಲ್ ಸೇನೆ ಸಮರ್ಥಿಸಿಕೊಂಡಿದೆ.
'ಕದನ ವಿರಾಮ ಒಪ್ಪಂದವನ್ನು ನಾವು ಎತ್ತಿ ಹಿಡಿಯುತ್ತೇವೆ. ಆದರೆ, ಯಾವುದೇ ರೀತಿಯ ಉಲ್ಲಂಘನೆಯನ್ನು ನಾವು ಸಹಿಸುವುದಿಲ್ಲ' ಎಂದು ಇಸ್ರೇಲ್ ಸೇನೆ ಹೇಳಿದೆ.

