ಮಂಜೇಶ್ವರ: ವರ್ಕಾಡಿ ಪಂಚಾಯಿತಿ ಸುಳ್ಯಮೆಯಲ್ಲಿ 116ಕಿ.ಗ್ರಾಂ ಗಾಂಜಾ ದಾಸ್ತಾನಿರಿಸಿದ್ದ ಪ್ರಕರಣದ ಪ್ರಮುಖ ಆರೋಪಿ, ತೊಕ್ಕೊಟ್ಟು ನಿವಾಸಿ, ಸನೋಹರ್ ಎಂಬಾತನನ್ನು ಮೈಸೂರಿನಿಂದ ಮಂಜೇಶ್ವರ ಠಾಣೆ ಇನ್ಸ್‍ಪೆಕ್ಟರ್ ಪಿ. ಅಜಿತ್‍ಕುಮಾರ್ ನೇತೃತ್ವದ ಪೊಲಿಸರ ತಂಡ ಬಂಧಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ಅವರ ನಿರ್ದೇಶದನ್ವಯ, ಎಎಸ್‍ಪಿ ಡಾ. ನಂದಗೋಪಾಲ್ ಅವರ ಮೇಲ್ನೋಟದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಅಕ್ಟೋಬರ್ 8ರಂದು ಸುಳ್ಯಮೆಯ ಮನೆ ಸನಿಹದ ದಾಸ್ತಾನು ಕೊಠಡಿಯಿಂದ 116ಕಿ.ಗ್ರಾಂ ಗಾಂಜಾ ಮತ್ತು ಗಾಂಜಾ ಸಾಗಾಟಕ್ಕಾಗಿ ಸನಿಹ ನಿಲ್ಲಿಸಲಾಗಿದ್ದ ಮಿನಿ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ನಿವಾಸಿ ಸಿದ್ಧ ಗೌಡ ಎಂಬಾತನನ್ನು ಪೊಲೀಸರುಬಂಧಿಸಿ ವಿಚಾರಣೆಗೊಳಪಡಿಸಿದಾಗ ಸನೋಹರ್ ಮಗ್ಗೆ ಮಾಹಿತಿ ಲಭಿಸಿತ್ತು. ಕೊಡಗು-ಮೈಸೂರು ಪ್ರದೇಶದಲ್ಲಿ ಕೆಲವೆಡೆ ಆನ್‍ಲೈನ್ ವಹಿವಾಟು ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈತ ಕೇರಳ, ಕರ್ನಾಟಕ, ತಮಿಳ್ನಾಡು, ಆಂಧ್ರ ಪ್ರದೇಶಗಳಿಗೆ ಗಾಂಜಾ ಪೂರೈಸುವ ಪ್ರಮುಖ ರೂವಾರಿಗಳಲ್ಲಿ ಒಬ್ಬನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

