ಕಾಸರಗೋಡು: ಸಿಪಿಎಂ ನೇತಾರನಾಗಿರುವ ತಂದೆ, ತನ್ನನ್ನು ಗೃಹಬಂಧನದಲ್ಲಿರಿಸಿ ಥಳಿಸುತ್ತಿರುವುದಲ್ಲದೆ, ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ 35ರ ಹರೆಯದ ವಿಚ್ಛೇದಿತ ಮಹಿಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿರುವ ಪ್ರಕರಣ ತಿರುವು ಪಡೆದುಕೊಂಡಿದ್ದು, ನಾಟಿ ಚಿಕಿತ್ಸೆಗೆ ಆಗಮಿಸಿರುವ ನೀಲೇಶ್ವರದ ಅನ್ಯ ಕೋಮಿನ ವಿವಾಹಿತ ವ್ಯಕ್ತಿಯೇ ಈಕೆಯನ್ನು ಪ್ರೀತಿಯ ನಾಟಕವಾಡಿ ಕರೆದೊಯ್ಯಲು ಯತ್ನಿಸುತ್ತಿರುವ ಸಂಶಯ ವ್ಯಕ್ತವಾಗಿದೆ. ಇದಕ್ಕಾಗಿ ನಾಟಿ ವೈದ್ಯ ವಿಚ್ಛೇದಿತ ಮಹಿಳೆಯನ್ನು ಗೃಹಬಂಧನದಲ್ಲಿರಿಸಿರುವುದಾಗಿ ಪ್ರಚಾರ ನಡೆಸಿ, ಆಕೆಯನ್ನು ಮನೆಯಿಂದ ಕರೆದೊಯ್ಯಲು ತಂತ್ರ ಹೂಡಿರುವುದಾಗಿ ಸಂಶಯಿಸಲಾಗಿದೆ.
ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಹಿಂದೂಪರ ಸಂಘಟನೆಗಳು ರಂಗಕ್ಕಿಳಿದಿದೆ. ಎರಡು ವರ್ಷದ ಹಿಂದೆ ನಡೆದ ಅಪಘಾತವೊಂದರಲ್ಲಿ ತನ್ನ ಎರಡು ಕಾಲುಗಳ ಚಲನ ಶಕ್ತಿ ಕಳೆದುಕೊಂಡಿರುವ ಮಹಿಳೆ ಚಿಕಿತ್ಸೆಗಾಗಿ ಮನೆಯವರು ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಈಕೆ ತವರು ಮನೆಯಲ್ಲಿ ತಂದೆಯ ಸಂಪೂರ್ಣ ಆರೈಕೆಯಲ್ಲಿದ್ದು, ಎಲ್ಲಾ ರೀತಿಯ ಚಿಕಿತ್ಸೆ ನಂತರವೂ ನಡೆದಾಡುವ ಸ್ಥಿತಿಗೆ ಬಾರದಿರುವುದರಿಂದ, ಯಾರೋ ನಾಟಿ ವೈದ್ಯನನ್ನು ಪರಿಚಯಿಸಿದ್ದಾರೆ. ಅಪಘಾತ ವಿಮೆ ರೂಪದಲ್ಲಿ ಲಕ್ಷಾಂತರ ರೂ. ಮೊತ್ತ ಲಭಿಸಲಿರುವ ಸುಳಿವು ಪಡೆದ ಈ ನಾಟಿ ವೈದ್ಯ, ಹಾಸಿಗೆಯಿಂದ ಮೇಲೇಳಲಾಗದ ಮಹಿಳೆಯನ್ನು ಪ್ರೀತಿಯ ನಾಟಕವಾಡಿ ಆಕೆಯ ಬ್ರೈನ್ ವಾಶ್ ಮಾಡಿ ಕರೆದೊಯ್ಯುವ ಸಂಚು ರೂಪಿಸಿದ್ದಾನೆ ಎಂಬ ದೂರು ವ್ಯಾಪಕಗೊಂಡಿದೆ. ಈಗಾಗಲೇ ಪತ್ನಿ, ಮೂವರು ಮಕ್ಕಳನ್ನು ಹೊಂದಿರುವ ಈ ನಾಟಿ ವೈದ್ಯ ಗಾಂಜಾ ದಂಧೆಯಲ್ಲೂ ತೊಡಗಿಸಿಕೊಂಡಿದ್ದು, ಚಿಕಿತ್ಸೆ ನೆಪದಲ್ಲಿ ಮಹಿಳೆಗೆ ಅಮಲು ಪದಾರ್ಥ ನೀಡಿರುವುದಾಗಿಯೂ ಮಾಹಿತಿಯಿದೆ. ಮಹಿಳೆ ಬ್ರೈನ್‍ವಾಶ್ ಮಾಡಿ, ಮನೆಯವರೊಂದಿಗೂ ವಿರೋಧ ಕಟ್ಟಿಕೊಳ್ಳುವಂತೆ ಮಾಡಿರುವ ಈತ, ಮನೆಯವರಿಂದ ವ್ಯಾಪಕ ಕಿರುಕುಳ ಅನುಭವಿಸುತ್ತಿರುವುದಾಗಿ ಅವಳ ಮೂಲಕ ವಿಡಿಯೋ ಸಂದೇಶವನ್ನೂ ಹರಿಯಬಿಡುವಂತೆ ಪ್ರೇರೇಪಿಸಿದ್ದಾನೆ. ತನ್ನ ಪುತ್ರಿಯ ಬ್ರೈನ್‍ವಾಶ್ ಮಾಡಿ, ಆಕೆಯನ್ನು ಲವ್‍ಜಿಹಾದ್ ಮೂಲಕ ತನ್ನ ವಶಕ್ಕೆ ತೆಗೆದುಕೊಳ್ಳಲು ನಾಟಿ ವೈದ್ಯ ಯತ್ನಿಸುತ್ತಿದ್ದು, ಈತನಿಗೆ ಕೆಲವರು ಸಹಾಯ ಒದಗಿಸುತ್ತಿರುವುದಾಗಿ ಮಹಿಳೆ ಮನೆಯವರು ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ.

