ಉಪ್ಪಳ: ಕುಬಣೂರಿನಲ್ಲಿ ಕಾಸರಗೋಡು ಅಬಕಾರಿ ನಾರ್ಕೋಟಿಕ್ ಸ್ಪೆಶ್ಯಲ್ ಸ್ಕ್ವೇಡ್ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಳಗೆ ಹಾಗೂ ಕಾರಿನಲ್ಲಿ ದಾಸ್ತಾನಿರಿಸಿದ್ದ 11.769ಕಿ.ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕುಬಣೂರು ಕಾಡಮೂಲೆ ನಿವಾಸಿ ಮೊಯ್ದೀನ್ ಶಬೀರ್ ಎಂಬಾತನನ್ನು ಬಂಧಿಸಿದ್ದಾರೆ.
ನಾರ್ಕೋಟಿಕ್ ಸ್ಪೆಶ್ಯಲ್ ಸ್ಕ್ವೇಡ್ ಇನ್ಸ್‍ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದಲ್ಲಿ ಆರೋಪಿಯ ಮನೆಗೆ ದಾಳಿ ನಡೆಸಿ ಮಲಗುವ ಕೊಠಡಿಯೊಳಗೆ ಮಂಚದ ತಳಭಾಗದಿಂದ ಹಾಗೂ ಮನೆ ವರಾಂಡದಲ್ಲಿ ನಿಲ್ಲಿಸಲಾಗಿದ್ದ ಕಾರಿನಿಂದ ಈ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮೊಯ್ದೀನ್ ಶಬೀರ್ ಈ ಹಿಂದೆ ಗಾಂಜಾ ಸಾಗಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜಾಮೀನಿನಲ್ಲಿ ಹೊರಬಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

