ವಾಷಿಂಗ್ಟನ್: ಗಾಝಾ ಯುದ್ಧ ಆರಂಭಗೊಂಡ 2 ವರ್ಷದಿಂದ ಅಮೆರಿಕಾವು ಇಸ್ರೇಲ್‍ಗೆ ಕನಿಷ್ಠ 21.7 ಶತಕೋಟಿ ಡಾಲರ್‌ಗಳಷ್ಟು ಮಿಲಿಟರಿ ನೆರವನ್ನು ಒದಗಿಸಿವೆ ಎಂದು ಮಂಗಳವಾರ ಪ್ರಕಟಗೊಂಡ ವರದಿ ಹೇಳಿದೆ.
ಇದರ ಜೊತೆಗೆ, ಕಳೆದ 2 ವರ್ಷಗಳಲ್ಲಿ ಅಮೆರಿಕಾವು ವಿಶಾಲ ಮಧ್ಯಪ್ರಾಚ್ಯದಲ್ಲಿ ಭದ್ರತಾ ನೆರವು ಮತ್ತು ಕಾರ್ಯಾಚರಣೆಗಳಿಗಾಗಿ ಸರಿಸುಮಾರು 10 ಶತಕೋಟಿ ಡಾಲರ್ ಮೊತ್ತವನ್ನು ಖರ್ಚು ಮಾಡಿದೆ ಎಂದು ಬ್ರೌನ್ ವಿಶ್ವವಿದ್ಯಾಲಯದ ವಾಟ್ಸನ್ ಸ್ಕೂಲ್ ಆಫ್ ಇಂಟರ್ ನ್ಯಾಷನಲ್ ಪ್ರಕಟಿಸಿರುವ `ಕಾಸ್ಟ್ ಆಫ್ ವಾರ್ ಪ್ರೊಜೆಕ್ಟ್' ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿ ಇಸ್ರೇಲನ್ನು ತೀವ್ರವಾಗಿ ಟೀಕಿಸಲಾಗಿದ್ದು ಅಮೆರಿಕಾದ ಸಹಾಯವಿಲ್ಲದೆ ಇಸ್ರೇಲ್ ಗಾಝಾದಲ್ಲಿನ ತನ್ನ ಯೋಜಿತ ಕಾರ್ಯಾಚರಣೆಯನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದೆ. ವಿವಿಧ ದ್ವಿಪಕ್ಷೀಯ ಒಪ್ಪಂದಗಳಡಿ ಇಸ್ರೇಲ್‍ಗಾಗಿ ಕೋಟ್ಯಾಂತರ ಡಾಲರ್ ನೆರವನ್ನು ಭವಿಷ್ಯದಲ್ಲಿ ಒದಗಿಸುವ ಯೋಜನೆಯನ್ನು ಅಮೆರಿಕಾ ಅನುಮೋದಿಸಿದೆ. ಗಾಝಾ ಯುದ್ಧ ಆರಂಭಗೊಂಡಾಗ ಅಮೆರಿಕಾ ಅಧ್ಯಕ್ಷರಾಗಿದ್ದ ಜೋ ಬೈಡನ್ ಆಡಳಿತ ಇಸ್ರೇಲ್‍ಗೆ 17.9 ಶತಕೋಟಿ ಡಾಲರ್ ಮಿಲಿಟರಿ ನೆರವು, ಎರಡನೇ ವರ್ಷ 3.8 ಶತಕೋಟಿ ಡಾಲರ್ ನೆರವು ಒದಗಿಸಿದೆ ಎಂದು ವರದಿ ಹೇಳಿದೆ.




