HEALTH TIPS

ಶಾಂತಿ ಸ್ಥಾಪನೆಗೆ ಸುಂಕ ಬಳಕೆ: ಅಮೆರಿಕ ಅಧ್ಯಕ್ಷರ ಪುನರುಚ್ಚಾರ

ನ್ಯೂಯಾರ್ಕ್/ ವಾಷಿಂಗ್ಟನ್: 'ಯುದ್ಧವನ್ನು ನಿಲ್ಲಿಸಲು 'ಸುಂಕ' ಹೇರುವ ಕ್ರಮವನ್ನು ಬಹಳ ಪರಿಣಾಮಕಾರಿಯಾಗಿ ಬಳಸಿದ್ದೇನೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 'ಭಾರತ-ಪಾಕಿಸ್ತಾನ ಯುದ್ಧ ಕೊನೆಗೊಳಿಸಲು ಇದೇ ತಂತ್ರವನ್ನು ಬಳಸಿದ್ದೇನೆ' ಎಂದು ಪುನರುಚ್ಚರಿಸಿದ್ದಾರೆ.

'ಅಮೆರಿಕದ ಪಾಲಿಗೆ ಸುಂಕ ಎಂಬುದು ಬಹಳ ಮುಖ್ಯವಾದುದು. ಸುಂಕದ ಕಾರಣದಿಂದಾಗಿ ನಾವು ಇಂದು ಶಾಂತಿ ಸ್ಥಾಪನೆ ಮಾಡುವವರಾಗಿದ್ದೇವೆ. ವಿವಿಧ ದೇಶಗಳ ಮೇಲೆ ಸುಂಕ ಹೇರುವುದರಿಂದ ನೂರಾರು ಶತಕೋಟಿ ಡಾಲರ್‌ಗಳ ಗಳಿಕೆಯ ಜತೆಯಲ್ಲೇ ಶಾಂತಿ ಕಾಪಾಡುವವನ ಪಾತ್ರವನ್ನು ನಿಭಾಯಿಸಲೂ ಸಾಧ್ಯವಾಗುತ್ತಿದೆ' ಎಂದು ಓವಲ್‌ ಕಚೇರಿಯಲ್ಲಿ ಸೋಮವಾರ ತಿಳಿಸಿದ್ದಾರೆ.

ಅಮೆರಿಕವು 'ಸುಂಕ'ವನ್ನು ಅಸ್ತ್ರವಾಗಿ ಬಳಸದಿದ್ದರೆ ನಾಲ್ಕು ಯುದ್ಧಗಳು ಇನ್ನಷ್ಟು ಉಲ್ಬಣಗೊಳ್ಳುತ್ತಿದ್ದವು ಎಂದು ಅವರು ಹೇಳಿದ್ದಾರೆ.

'ನಾನು ಯುದ್ಧಗಳನ್ನು ನಿಲ್ಲಿಸಲು ಸುಂಕವನ್ನು ಅಸ್ತ್ರವಾಗಿ ಬಳಸುತ್ತಿದ್ದೇನೆ. ನೀವು ಭಾರತ - ಪಾಕಿಸ್ತಾನ ಯುದ್ಧವನ್ನು ನೋಡಿದ್ದೀರಿ. ಅವರು ಪರಸ್ಪರರ ಮೇಲೆ ಮುಗಿಬೀಳಲು ಸಿದ್ಧರಾಗಿದ್ದರು. ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಅಣ್ವಸ್ತ್ರ ಹೊಂದಿರುವ ಎರಡು ರಾಷ್ಟ್ರಗಳು ಯುದ್ಧವನ್ನು ಮುಂದುವರಿಸಲು ಬಯಸಿದ್ದವು' ಎಂದಿದ್ದಾರೆ.

'ನಾನು ಎರಡೂ ರಾಷ್ಟ್ರಗಳಿಗೆ ಏನಂದೆ ಎಂಬುದನ್ನು ನಿಖರವಾಗಿ ಹೇಳಲು ಬಯಸುವುದಿಲ್ಲ. ಆದರೆ ನನ್ನ ಸಲಹೆ ತುಂಬಾ ಪರಿಣಾಮಕಾರಿಯಾಯಿತು. ಎರಡೂ ದೇಶಗಳು ಯುದ್ಧ ನಿಲ್ಲಿಸಿದವು. ವ್ಯಾಪಾರ ಮತ್ತು ಸುಂಕವನ್ನು ಮುಂದಿಟ್ಟುಕೊಂಡು ನನಗೆ ಯುದ್ಧ ನಿಲ್ಲಿಸಲು ಸಾಧ್ಯವಾಯಿತು' ಎಂದು ಹೇಳಿದ್ದಾರೆ.

'ನನ್ನ ಎರಡನೇ ಅವಧಿಯ ಆಡಳಿತದಲ್ಲಿ ಇದುವರೆಗೆ ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ' ಎಂಬ ಹೇಳಿಕೆಯನ್ನು ಟ್ರಂಪ್‌ ಹಲವು ಸಲ ಪುನರುಚ್ಚರಿಸಿದ್ದಾರೆ. ಭಾರತ-ಪಾಕಿಸ್ತಾನ, ಕಾಂಬೋಡಿಯ-ಥಾಯ್ಲೆಂಡ್‌, ಕೊಸೊವೊ-ಸರ್ಬಿಯಾ, ಕಾಂಗೊ-ರುವಾಂಡ, ಇಸ್ರೇಲ್‌-ಇರಾನ್, ಈಜಿಪ್ಟ್‌-ಇಥಿಯೋಪಿಯಾ ಮತ್ತು ಅರ್ಮೇನಿಯಾ-ಅಜರ್‌ಬೈಜಾನ್‌ ಮಧ್ಯದ ಯುದ್ಧವನ್ನು ನಿಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries