ಬದಿಯಡ್ಕ: ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿಯ ನೇತೃತ್ವದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯನಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಿ.ಶಂಕರ ದರ್ಬೆತ್ತಡ್ಕ ಅವರಿಗೆ `ರಜತ ಶಂಕರ' ಗೌರವಾಭಿನಂದನೆ ಕಾರ್ಯಕ್ರಮ ಭಾನುವಾರ ಬೇಳ ವಿಷ್ಣುಮೂರ್ತಿ ನಗರದಲ್ಲಿರುವ ವಿ.ಎಂ. ಆಡಿಟೋರಿಯಂನಲ್ಲಿ ಜರಗಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ದೀಪಬೆಳಗಿಸಿ ಉದ್ಘಾಟಿಸಿದರು. ಡಿ.ಶಂಕರ ದಂಪತಿಗಳನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತ ಜನರೆಡೆಯಲ್ಲಿ ವಿಜಯಿಯಾಗಿ ವರ್ಷಗಟ್ಟಲೆ ಜನಪ್ರತಿನಿಧಿಯಾಗಿರುವುದು ಅಭಿಮಾನವಾಗಿದೆ. ವಿಜಯವನ್ನೇ ಕಾಣುತ್ತಿರುವ ಬಿಜೆಪಿಯ ಜನರನ್ನು ಕಾಣುವ ಸೌಭಾಗ್ಯವನ್ನು ಒದಗಿಸಿಕೊಟ್ಟ ಜಿಲ್ಲೆಯಾಗಿದೆ ಕಾಸರಗೋಡು. ನಾವೆಲ್ಲರೂ ಕಾಸರಗೋಡು ಜಿಲ್ಲೆಯನ್ನು ನೋಡಿ ವಿಜಯೋತ್ಸವವನ್ನು ಆಚರಿಸುತ್ತಿದ್ದ ಕಾಲವಿತ್ತು. ಸ್ತ್ರೀಯರನ್ನು ಪೂಜಿಸುವ, ಗೌರವಿಸುವ ಪಕ್ಷವಾಗಿದೆ ಬಿಜೆಪಿ ಎನ್ನುವುದಕ್ಕೆ ಕಾಸರಗೋಡಿನ ಜಿಲ್ಲಾಧ್ಯಕ್ಷೆಯೇ ಸಾಕ್ಷಿಯಾಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೇರುವ ಹಂತದಲ್ಲಿ ಎಡಬಲ ರಂಗಗಳು ಒಂದಾಗುತ್ತವೆ. ಆದರೆ ಇದೆಲ್ಲವನ್ನೂ ಮೆಟ್ಟಿನಿಂತು ಮುಂದಿನ ದಿನಗಳಲ್ಲಿ ನಮ್ಮ ನಾಯಕರು ಶಾಸಕರು ಸಂಸದರು ಎಂಬ ಹಣೆಪಟ್ಟಿಯನ್ನು ಪಡೆಯಬೇಕಾಗಿದೆ. ಅದಕ್ಕಾಗಿ ಕಾರ್ಯಕರ್ತರು ತಳಮಟ್ಟದಲ್ಲಿ ಗ್ರಾಮಪಂಚಾಯಿತಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ನಮ್ಮ ಅಭ್ಯರ್ಥಿಗಳನ್ನು ವಿಜಯಗೊಳಿಸಬೇಕಾಗಿದೆ. ಅಯ್ಯಪ್ಪ ಸಂಗಮದ ಹೆಸರಿನಲ್ಲಿ ದೇವಭಕ್ತ, ಭಕ್ತಶಿರೋಮಣಿ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿಜವಾದ ಭಕ್ತನಾಗಿದ್ದರೆ ಶಬರಿಮಲೆಯಲ್ಲಿ ಚಿನ್ನ ಕಳವು ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂಬುದು ಬಿಜೆಪಿಯ ಆಗ್ರಹವಾಗಿದೆ ಎಂದರು.
ವಿಶ್ವಹಿಂದೂಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿ ಕೋಝಿಕ್ಕೋಡು ವಲಯ ಅಧ್ಯಕ್ಷ ವಕೀಲ ಕೆ.ಶ್ರೀಕಾಂತ್, ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ರಾಜ್ಯ ಸಮಿತಿ ಸದಸ್ಯರುಗಳಾದ ರವೀಶ ತಂತ್ರಿ ಕುಂಟಾರು, ರಾಮಪ್ಪ ಮಂಜೇಶ್ವರ, ಕೋಝಿಕ್ಕೋಡು ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಉಪಾಧ್ಯಕ್ಷ ವಿಜಯ ರೈ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ವಸಂತ ರೈ ಬೇಳ, ಪ್ರಮುಖರಾದ ಮುರಳೀಧರ ಯಾದವ್, ರವೀಂದ್ರ ರೈ ಗೋಸಾಡ, ಸುಕುಮಾರ ಕುದ್ರೆಪ್ಪಾಡಿ, ಅಶ್ವಿನಿ ಮೊಳೆಯಾರು, ವಿಶ್ವನಾಥ ಪ್ರಭು, ಮಧುಚಂದ್ರ ಮಾನ್ಯ, ಆನಂದ ಕೆ., ಗಣಪತಿ ಪ್ರಸಾದ ಕುಳಮರ್ವ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಶ್ರೀಕೃಷ್ಣ ಭಟ್ ವಾಶೆಮನೆ, ಉಪಾಧ್ಯಕ್ಷೆ ಸಾವಿತ್ರಿ ಅಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಅಭಿನಂದನಾ ಸಮಿತಿ ಅಧ್ಯಕ್ಷ ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಪಶ್ಚಿಮ ವಲಯ ಅಧ್ಯಕ್ಷ ಮಹೇಶ್ ವಳಕ್ಕುಂಜ ಸ್ವಾಗತಿಸಿದರು. ಅಭಿನಂದನಾ ಸಮಿತಿ ಸಂಚಾಲಕ ಮಂಜುನಾಥ ಮಾನ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಅವಿನಾಶ್ ವಿ.ರೈ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಮೋನ ನೀರ್ಚಾಲು ವಂದೇಮಾತರಂ ಹಾಡಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಡಿ.ಶಂಕರ ಅವರನ್ನು ತೆರೆದ ವಾಹನದಲ್ಲಿ ನೀರ್ಚಾಲು ಪೇಟೆಯಿಂದ ಮೆರವಣಿಗೆಯ ಮೂಲಕ ಕರೆತರಲಾಯಿತು. ಧಾರ್ಮಿಕ ಮುಂದಾಳು ಬಾಬು ಪಚ್ಲಂಪಾರೆ ಧ್ವಜಾರೋಹಣಗೈದರು.


