ಪೆರ್ಲ: ಜಿಲ್ಲಾ ಹಾಲು ಉತ್ಪಾದಕರ ಸಮಾವೇಶ ಅಕ್ಟೋಬರ್ 3 ರಂದು ಪೆರ್ಲ ಇಡಿಯಡ್ಕ ಕ್ಷೇತ್ರದ ಶ್ರೀ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಲಿದ್ದು, ಹೈನುಗಾರಿಕೆ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ 'ಮಿಲ್ಮಾ'ನಿರ್ದೇಶಕ ಸಿ. ನಾರಾಯಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪೆರ್ಲ ಹಾಲು ಉತ್ಪಾದಕರ ಸಹಕಾರ ಸಂಘದ ಆತಿಥ್ಯದಲ್ಲಿ ನಡೆಯುವ ಜಿಲ್ಲಾ ಹಾಲು ಉತ್ಪಾದಕರ ಸಮಾವೇಶವನ್ನು ರಾಜ್ಯ ಮೃಗಸಂರಕ್ಷಣೆ ಹಾಲು ಅಭಿವೃದ್ಧಿ ಖಾತೆ ಸಚಿವೆ ಜೆ. ಚಿಂಜುರಾಣಿ ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ಶಿ ಕೆ. ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಸಕರಾದ ಇ.ಚಂದ್ರಶೇಖರನ್, ಎನ್.ಎ.ನೆಲ್ಲಿಕುನ್ನು, ಸಿ.ಎಚ್. ಕುಂಜಂಬು, ಎಂ.ರಾಜಗೋಪಾಲನ್, ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ, ಕೇರಳ ಡೇರಿ ಅಭಿವೃದ್ಧಿ ನಿಗಮ ಅಧ್ಯಕ್ಷ ವಿ.ಪಿ. ಉನ್ನಿಕೃಷ್ಣನ್, ಕೇರಳ ಫೀಡ್ಸ್ ಅಧ್ಯಕ್ಷ ಕೆ. ಶ್ರೀಕುಮಾರ್, ಮಿಲ್ಮಾ ನಿರ್ದೇಶಕ ಪಿ.ಪಿ. ನಾರಾಯಣನ್, ತ್ರಿಸ್ತರ ಪಂಚಾಯಿತಿ ಪ್ರತಿನಿಧಿಗಳು, ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲೆಯ ವಿವಿಧ ಡೈರಿ ಸಹಕಾರ ಸಂಘಗಳ ಅಧ್ಯಕ್ಷರು ಉದ್ಘಾಟನಾ ಸಭೆಯಲ್ಲಿ ಭಾಗವಹಿಸಲಿದ್ದಾgಭಾಗವಹಿಸುವರು. ಈ ಸಂದರ್ಭ ಜಿಲ್ಲೆಯಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಡೇರಿ ರೈತರು ಮತ್ತು ಡೇರಿ ಗುಂಪುಗಳನ್ನು ಸನ್ಮಾನಿಸಲಾಗುವುದು
ಅಂದು ಬೆಳಿಗ್ಗೆ 8ಕ್ಕೆ ಸಂಘಟನಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ.ಕೆ ಅವರು ಧ್ವಜಾರೋಹಣ ನಡೆಸುವರು. 9ಕ್ಕೆ ಡೇರಿ ಉತ್ಪನ್ನ ತಯಾರಿಕಾ ಪ್ರದರ್ಶನವನ್ನು ಎನ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ.ಜೆ.ಎಸ್ ಉದ್ಘಾಟಿಸುವರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಬಟ್ಟು ಶೆಟ್ಟಿ ಕಾಟುಕುಕ್ಕೆ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಡೇರಿ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ತಾಂತ್ರಿಕ ತಜ್ಞರು ವಿಷಯಗಳನ್ನು ಮಂಡಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಿಲ್ಮಾ ನಿರ್ದೇಶಕ ಸುಧಾಕರನ್, ಉಷಾದೇವಿ, ಪ್ರಚಾರ ಸಮಿತಿ ಅಧ್ಯಕ್ಷ ನಾರಾಯಣನ್, ಸಿಜೋನ್ ಜಾನ್ಸನ್, ಕಲ್ಯಾಣಿ ನಾಯರ್, ಮನೋಹರನ್, ಅಜಯನ್ ಎಸ್ ಉಪಸ್ಥಿತರಿದ್ದರು.




