ಕಾಸರಗೋಡು: ಜಿಲ್ಲೆಯ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರ, ಕೋಮುಸಾಮರಸ್ಯದ ತಾಣವಾಗಿ ಹೆಸರು ಪಡೆದಿರುವ ಕಾಸರಗೋಡು ನೆಲ್ಲಿಕುಂಜೆ ತಙಳ್ ಉಪ್ಪಾಪ ಉರುಸ್ ಸಮಾರಂಭ 2026 ಜ. 7ರಿಂದ 18ರ ವರೆಗೆ ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಪ್ರಾಂಗಣದಲ್ಲಿ ಜರುಗಲಿರುವುದಾಗಿ ಉರುಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಸಉದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನೆಲ್ಲಿಕುಂಜೆ ಮುಹಿದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ಅಂತ್ಯವಿಶ್ರಾಂತಿಯಲ್ಲಿರುವ ಮುಹಮ್ಮದ್ ಹನೀಫ್‍ವಲಿಯುಲ್ಲಾಹಿ ತಙಳ್ ಉಪ್ಪಾಪ ಅವರ ಹೆಸರಲ್ಲಿ ಪ್ರತಿ ಎರಡು ವರ್ಷಗಲಿಗೆ ಒಂದುಬಾರಿ ಉರುಸ್ ನಡೆಸಲಾಗುತ್ತಿದೆ. ಜಾತಿಭೇದ ಮರೆತು ಕಾಸರಗೋಡು, ಕನ್ಣೂರು ಹಾಗೂ ಅವಿಭಜಿತ ದ.ಕ ಜಿಲ್ಲೆಗಳಿಂದ ಭಕ್ತಾದಿಗಳು ನೆಲ್ಲಿಕುಂಜೆಯ ತಙಳ್ ಉಪ್ಪಾಪ ಉರುಸ್ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
1882 ರಲ್ಲಿ ಕೊಲ್ಲಂ ಜಿಲ್ಲೆಯ ಕರುನಾಗಪ್ಪಳ್ಳಿಯಲ್ಲಿ ಜನಿಸಿದ್ದ ತಙಳ್ ಉಪ್ಪಾಪ ಅವರು ಕುರಾನ್ ವ್ಯಾಸಂಗದ ನಂತರ ಮಂಗಳೂರು ಮತ್ತು ಕಾಸರಗೋಡು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿಯೂ ಅಧ್ಯಯನ ನಡೆಸಿದ್ದಾರೆ. ನೆಲ್ಲಿಕುಂಜೆ ಜುಮಾ ಮಸೀದಿಯಲ್ಲಿ 1962ರ ಸೆ. 6ರಂದು ನಿಧನರಾದ ನಂತರ ನಾನಾ ಕಡೆಯಿಂದ ಜನರು ಉಪ್ಪಾಪ ಅವರ ಸಮಾಧಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ. ಜನವರಿ 7ರಿಮದ 11 ದಿನಗಳ ಕಾಲ ನಡೆಯುವ ಉರುಸ್ ಸಮಾರಂಭದಲ್ಲಿ ಸಂದರ್ಭದಲ್ಲಿ ಪ್ರಮುಖ ವಾಗ್ಮಿಗಳು, ವಿದ್ವಾಂಸರು ಮತ್ತು ಸೂಫಿಗಳು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಜನವರಿ 18 ರಂದು ಬೆಳಗ್ಗೆ 5ರಿಂದ ಒಂದು ಲಕ್ಷಕ್ಕೂ ಮಿಕ್ಕಿಭಕ್ತಾದಿಗಳಿಗೆ ತುಪ್ಪದ ಅನ್ನ ವಿತರಣೆ ನಡೆಸುವ ಮೂಲಕ ಉರುಸ್ ಸಂಪನ್ನಗೊಳ್ಳಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರುಸ್ ಸಮಿತಿ ಅಧ್ಯಕ್ಷ ಟಿ.ಎ. ಮಹಮೂದ್ ಹಾಜಿ, ಕೋಶಾಧಿಕಾರಿ ಅಶ್ರಫ್ ಸಿ.ಎಂ, ಮುಹಿಯುದ್ದೀನ್ ಜುಮಾ ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಹನೀಫ್ ನೆಲ್ಲಿಕುನ್ನು, ಕೋಶಾಧಿಕಾರಿ ಎನ್.ಎ.ಹಮೀದ್, ಹನೀಫ್.ಎಂ.ಎ, ಎನ್.ಎ.ಇಕ್ಬಾಲ್ ಉಪಸ್ಥಿತರಿದ್ದರು.

