ಕಾಸರಗೋಡು: ಶಾಲಾ ಕಾಲೇಜುಗಳ ಹಾಗೂ ಇತರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳನ್ನು ಹಣ ನೀಡಿ ಖರೀದಿಸಿ, ಈ ಮೂಲಕ ತಮ್ಮ ಅನಧಿಕೃತ ಹಣದ ವಹಿವಾಟು ನಡೆಸುತ್ತಿರುವ ವಂಚನಾ ಜಾಲವೊಂದನ್ನು ಜಿಲ್ಲಾ ಪೊಲೀಸ್ ಇಲಾಖೆ ಪತ್ತೆಹಚ್ಚಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಜತೆಗೆ ಶಾಲಾ-ಕಾಳೇಜು ವಿದ್ಯಾರ್ಥಿಗಳು ಹಾಗೂ ಇತರ ಮಕ್ಕಳ ಬ್ಯಾಂಕ್ ಖಾತೆಗಳ ಮೇಲೆ ಸೈಬರ್ ಪೊಲೀಸರು ನಿಗಾಯಿರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿವಿಜಯಭರತ್ ರೆಡ್ಡಿ ಅವರ ನಿರ್ದೇಶ ಪ್ರಕಾರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಶಾಲಾ-ಕಾಲೇಜು ಹಾಗೂ ಇತರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡುಗಳನ್ನು ಸೈಬರ್ ವಂಚನಾ ಜಾಲದ ಸದಸ್ಯರು ಹಣ ನೀಡಿ ಖರೀದಿಸಿ, ಈ ಮೂಲಕ ತಮ್ಮ ಆನ್‍ಲೈನ್ ವಂಚನಾ ದಂಧೆಯನ್ನು ಮುಂದುವರಿಸುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಬ್ಯಾಂಕ್ ಖಾತೆ, ಎಟಿಎಂ ಬಾಡಿಗೆಗೆ ಪಡೆದುಕೊಳ್ಳುವ ವಂಚನಾಜಾಲದವರು, ಅವರ ಖಾತೆಗೆ ನಿಗದಿತ ಮೊತ್ತವನ್ನು ಬಾಡಿಗೆ ರೂಪದಲ್ಲಿ ಪಾವತಿಸಿರುವುದನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ತಮ್ಮ ಪೋಕೆಟ್ ಮನಿ ಆಸೆಗಾಗಿ ಕೆಲವು ವಿದ್ಯಾರ್ಥಿಗಳು ಈ ರೀತಿ ತಮ್ಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡುಗಳನ್ನು ನೀಡುತ್ತಿದ್ದು, ವಂಚನಾ ಜಾಲದಲ್ಲಿ ಸಿಲುಕಿಕೊಂಡಲ್ಲಿ, ಇದರಿಂದ ಹೊರಬರಲು ಚಡಪಡಿಸಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಬಹುದು ಎಂಬುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣ ದಾಖಲು:
ಆನ್‍ಲೈನ್ ವಂಚನೆಗಾಗಿ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಬಾಡಿಗೆಗೆ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ಆರೋಪಿಗಳು ಪ್ರಸಕ್ತ ವಿದೇಶದಲ್ಲಿರುವುದರಿಂದ ಇವರ ಬಂಧನ ಸಾಧ್ಯವಾಗಿಲ್ಲ. ಕಳೆದ ವರ್ಷ ಕಾಸರಗೋಡು ನಗರದ ವಿದ್ಯಾರ್ಥಿಯೊಬ್ಬನ ಬ್ಯಾಂಕ್ ಖಾತೆಯನ್ನು ಮಾಸಿಕ 5ಸಾವಿರ ರೂ. ಬಾಡಿಗೆ ನೀಡಿ ಪಡೆದುಕೊಂಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ಬಗ್ಗೆ ಕೇಸೂ ದಾಖಲಾಗಿತ್ತು.

