ಕಾಸರಗೋಡು: ಸಮೂಹ ಯೋಜನೆಯ ಪರಿಣಾಮವಾಗಿ ಮಹಿಳಾ ಆಂದೋಲನವಾಗಿ ಹೊರಹೊಮ್ಮಿದ ಕುಟುಂಬಶ್ರೀ, ವೈಚಾರಿಕ, ವೈಜ್ಞಾನಿಕ ಮತ್ತು ಪರಿಸರ ಪ್ರಜ್ಞೆಯ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ. ಶಶೀಂದ್ರನ್ ಹೇಳಿದರು.
ಜಿಲ್ಲಾ ಪಂಚಾಯತಿಯಿಂದ ಮಂಜೂರಾದ ಸ್ವಾತಿ ಆಫ್‍ಸೆಟ್ ಮುದ್ರಣಾಲಯದ ಹೊಸ ಕಟ್ಟಡ ಮತ್ತು ಅದರೊಂದಿಗೆ ಜಿಲ್ಲಾ ಮಿಷನ್ ನೇತೃತ್ವದಲ್ಲಿ ನಿರ್ಮಿಸಲಾದ ಜಿಲ್ಲೆಯ ಮೊದಲ ಇನ್‍ಕ್ಯುಬೇಷನ್ ಕೇಂದ್ರವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ತನ್ನ ಕೆಲಸದ ಸಂಪ್ರದಾಯದಿಂದಾಗಿ ವಿಶ್ವಾಸಾರ್ಹ ಸಂಸ್ಥೆಯ ಹೆಸರು ಗಳಿಸಿರುವ ಸ್ವಾತಿ ಮುದ್ರಣಾಲಯದ ಸಾಧನೆಗಳು ಕಳೆದ ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಕುಟುಂಬಶ್ರೀಯ ಪ್ರಮುಖ ಸಾಧನೆಗಳಲ್ಲಿ ಸೇರಿವೆ ಎಂದು ಸಚಿವರು ಹೇಳಿದರು.
ಕಟ್ಟಡಕ್ಕೆ ಸಂಬಂಧಿಸಿದಂತೆ ನಿರ್ಮಿಸಲಾದ ಇನ್‍ಕ್ಯುಬೇಶನ್ ಕೊಠಡಿಯನ್ನು ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸಿದರು, ಕಂಪ್ಯೂಟರ್ ಕೊಠಡಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು, ಕಟಿಂಗ್ ಮೆಷಿನ್ ಅನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರ್ ಉದ್ಘಾಟಿಸಿದರು, ಮತ್ತು ಮುದ್ರಣಾಲಯಕ್ಕಾಗಿ ಹೊಸದಾಗಿ ಖರೀದಿಸಿದ ವಾಹನದ ಕೀಲಿಗಳನ್ನು ಚೆಮ್ಮನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕರ್ ಹಸ್ತಾಂತರಿಸಿದರು.
ಕುಟುಂಬಶ್ರೀ ಜಿಲ್ಲಾ ಮಿಷನ್ ಅಡಿಯಲ್ಲಿ ಪ್ರಸ್ತುತ ಅತಿದೊಡ್ಡ ಉದ್ಯಮ ಮಾದರಿಯಾಗಿರುವ ಸ್ವಾತಿ ಮುದ್ರಣ ಪ್ರೆಸ್ ಅನ್ನು ಚೆಮ್ಮನಾಡ್ ಗ್ರಾಮ ಪಂಚಾಯತ್‍ನ ಕೊಲಂಕುನ್ನುವಿನ ಕುಟುಂಬಶ್ರೀ ಸದಸ್ಯರು ಪ್ರಾರಂಭಿಸಿದರು. 2003 ರಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್‍ನೊಂದಿಗೆ 1500 ರೂ. ಸಮುದಾಯ ಕೊಡುಗೆಯೊಂದಿಗೆ ಪ್ರಾರಂಭವಾದ ಈ ಉದ್ಯಮವು ಇಂದು ಸುಮಾರು 65 ಲಕ್ಷ ರೂ.ಗಳ ಆಸ್ತಿಯನ್ನು ಹೊಂದಿರುವ ದೊಡ್ಡ ಉದ್ಯಮವಾಗಿದ್ದು, 13 ಮಹಿಳೆಯರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ. ಬಟ್ಟೆ ಬ್ಯಾನರ್ ಮುದ್ರಣ ವಿಭಾಗ ಮತ್ತು ನೋಟ್‍ಬುಕ್ ಉತ್ಪಾದನಾ ಘಟಕವು ಪ್ರಸ್ತುತ ಇದರ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ.
5,000 ಚದರ ಅಡಿ ವಿಸ್ತೀರ್ಣದಲ್ಲಿರುವ ಹೊಸ ಕಟ್ಟಡವು ಅತ್ಯಾಧುನಿಕ ಮುದ್ರಣ ಉಪಕರಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ. ಜತೆಗೆ ಜಿಲ್ಲೆಯಲ್ಲಿ ಕಿರು ಉದ್ದಿಮೆಗಳನ್ನು ಉತ್ತೇಜಿಸಲು ತರಬೇತಿ ನೀಡಲು 60 ಜನರ ಸಾಮಥ್ರ್ಯದ ತರಬೇತಿ ಕೊಠಡಿ ಲಭ್ಯವಿರುತ್ತದೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಎಚ್.ಕುಂಞಂಬು ವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ರತೀಶ್ ಪಿಲಿಕೋಡ್ ಯೋಜನೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಸ್ ಪಾದೂರು, ಕುಟುಂಬಶ್ರೀ ರಾಜ್ಯ ಮಿಷನ್ ಕಾರ್ಯಕ್ರಮ ವ್ಯವಸ್ಥಾಪಕ ಅನೀಶ್ ಕುಮಾರ್ ಭಾಗವಹಿಸಿದ್ದರು. ಚೆಮ್ಮನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಬ್ರಾಹಿಂ ಮನ್ಸೂರ್ ಕುರಿಕ್ಕಾಲ್, ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಸಮೀಮಾ ಅನ್ಸಾರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಂಸುದ್ದೀನ್ ತೆಕ್ಕಿಲ್, ಆಯಿಷಾ ಅಬೂಬಕರ್, ರಾಮ ಗಂಗಾಧರನ್, ಚೆಮ್ಮನಾಡು ಗ್ರಾಮ ಪಂಚಾಯತ್ ಸದಸ್ಯರಾದ ತಾ.ಪಂ. ನಿಸಾರ್, ರಾಜನ್ ಕೆ.ಪೆÇಯಿನಾಚಿ, ಕುಟುಂಬಶ್ರೀ ಜಿಲ್ಲಾ ಮಿಷನ್ ಎಡಿಎಂಸಿಗಳಾದ ಡಿ.ಹರಿದಾಸ್, ಕಿಶೋರ್ ಕುಮಾರ್, ಸಿ.ಎಂ. ಸೌದಾ, ಕುಟುಂಬಶ್ರೀ ಮಾದರಿ ಚೆಮ್ಮನಾಡು ಗ್ರಾಮ ಪಂಚಾಯಿತಿ ಸಿಡಿಎಸ್ ಅಧ್ಯಕ್ಷೆ ಮುಮ್ತಾಜ್ ಅಬೂಬಕರ್, ಕುಟುಂಬಶ್ರೀ ಜಿಲ್ಲಾ ಮಿಷನ್ ಕಾರ್ಯಕ್ರಮ ವ್ಯವಸ್ಥಾಪಕ ಕೆ.ಟಿ.ಜಿತಿನ್ ಮಾತನಾಡಿದರು. ಚೆಮ್ಮನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್ ಸ್ವಾಗತಿಸಿ, ಸ್ವಾತಿ ಪ್ರಿಂಟಿಂಗ್ ಪ್ರೆಸ್ ಕಾರ್ಯದರ್ಶಿ ಕೆ.ಪದ್ಮಿನಿ ವಂದಿಸಿದರು.


