ನವದೆಹಲಿ: ತಮ್ಮ ಪತಿ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಬಂಧನವನ್ನು ಪ್ರಶ್ನಿಸಿ ಗೀತಾಂತಜಲಿ ಜೆ ಅಂಗ್ಮೋ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ವಿಚಾರವಾಗಿ 10 ದಿನಗಳ ಒಳಗೆ ಪ್ರತಿಕ್ರಿಯೆ ದಾಖಲಿಸುವಂತೆ ಕೇಂದ್ರ ಸರ್ಕಾರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಬುಧವಾರ ನಿರ್ದೇಶಿಸಿದೆ.
ನ್ಯಾ. ಅರವಿಂದ ಕುಮಾರ್ ಹಾಗೂ ನ್ಯಾ. ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, ಕೇಂದ್ರ ಮತ್ತು ಲಡಾಖ್ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನಿರ್ದೇಶನ ನೀಡಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಪ್ರತಿವಾದ ಮಂಡಿಸುವುದಕ್ಕೂ ಅವಕಾಶ ಕಲ್ಪಿಸಿದ್ದು, ವಿಚಾರಣೆಯ್ನು ನವೆಂಬರ್ 24ಕ್ಕೆ ಮುಂದೂಡಿದೆ.
ವಾಂಗ್ಚುಕ್ ಅವರು ಸದ್ಯ ರಾಜಸ್ಥಾನದ ಜೋಧಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಅವರ ಬಂಧನವನ್ನು ಪ್ರಶ್ನಿಸಿ ಹೆಚ್ಚುವರಿ ಆಧಾರಗಳೊಂದಿಗೆ ತಿದ್ದುಪಡಿ ಅರ್ಜಿ ಸಲ್ಲಿಸಲು ಅವಕಾಶ ಕೋರಿದ್ದ ಅಂಗ್ಮೋ ಅವರ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 15ರಂದು ಮುಂದೂಡಿತ್ತು.
ಲಡಾಖ್‌ಗೆ ರಾಜ್ಯ ಸ್ಥಾನಮಾನಕ್ಕಾಗಿ ಒತ್ತಾಯಿಸಿ ಲೇಹ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ (ಸೆಪ್ಟೆಂಬರ್ 24ರಂದು) ಹಿಂಸಾಚಾರಕ್ಕೆ ತಿರುಗಿ ನಾಲ್ವರು ಮೃತಪಟ್ಟು, 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರ ಬೆನ್ನಲ್ಲೇ, ವಾಂಗ್ಚುಕ್ ಅವರು ಉಪವಾಸ ಸತ್ಯಾಗ್ರಹ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಆದರೆ, ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಸೆಪ್ಟೆಂಬರ್ 26ರಂದು ಬಂಧಿಸಲಾಗಿದೆ.

