HEALTH TIPS

ವೋಟಿಗಾಗಿ ವೇದಿಕೆಯ ಮೇಲೆ ನೃತ್ಯ ಮಾಡಬಲ್ಲ ಪ್ರಧಾನಿ ಮೋದಿ: ರಾಹುಲ್ ಗಾಂಧಿ ವ್ಯಂಗ್ಯ

ಪಟ್ನಾ: ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು ಬಿರುಸುಪಡೆದುಕೊಂಡಿವೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಪರಸ್ಪರ ಬೆಂಕಿಯುಗುಳಲಾರಂಭಿಸಿದ್ದಾರೆ.

243 ಕ್ಷೇತ್ರಗಳಿರುವ ಬಿಹಾರದಲ್ಲಿ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿಯಾಗಿದೆ. ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ನವೆಂಬರ್‌ 6ರಂದು, ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ನವೆಂಬರ್‌ 11ರಂದು ಮತದಾನವಾಗಲಿದೆ.

ನವೆಂಬರ್‌ 14ರಂದು ಫಲಿತಾಂಶ ಪ್ರಕಟವಾಗಲಿದೆ.

ಕಾಂಗ್ರೆಸ್‌ ಸಂಸದ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆಗಿರುವ ರಾಹುಲ್‌ ಗಾಂಧಿ ಅವರು, ಮುಜಾಫರ್‌ಪುರದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನ ಮಂತ್ರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಹಾರ ಸರ್ಕಾರವನ್ನು ಬಿಜೆಪಿಯು ರಿಮೋಟ್‌ ಕಂಟ್ರೋಲ್‌ ಮೂಲಕ ನಡೆಸುತ್ತಿದೆ ಎಂದು ಟೀಕಿಸಿರುವ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರು ವೋಟಿಗಾಗಿ ವೇದಿಕೆ ಮೇಲೆ ನೃತ್ಯ ಮಾಡಬಲ್ಲರು' ಎಂದು ವ್ಯಂಗ್ಯವಾಡಿದ್ದಾರೆ.

'ಬಿಹಾರ ಸರ್ಕಾರವನ್ನು ರಿಮೋಟ್‌ ಕಂಟ್ರೋಲ್‌ ಮೂಲಕ ನಡೆಸಲಾಗುತ್ತಿದೆ ಎಂಬುದಾಗಿ ತೇಜಸ್ವಿ ಯಾದವ್‌ (ಆರ್‌ಜೆಡಿ ನಾಯಕ) ಇದೇ ವೇದಿಕೆಯಲ್ಲಿ ಹೇಳಿದ್ದಾರೆ. ಅವರ ಮಾತನ್ನು ಒಪ್ಪುತ್ತೇನೆ. ಬಿಜೆಪಿಯು ನಿತೀಶ್‌ ಕುಮಾರ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಳಸಿಕೊಳ್ಳುತ್ತಿದೆ' ಎಂದು ದೂರಿದ್ದಾರೆ.

'ಸದ್ಯ ಭಾರತ ಎರಡು ರೀತಿಯಲ್ಲಿ ರೂಪುಗೊಳ್ಳುತ್ತಿದೆ. ಒಂದು ಜನಸಾಮಾನ್ಯರಿಗೆ ಸೇರಿದ್ದು. ಮತ್ತೊಂದು, ಐದು ಅಥವಾ ಹತ್ತು ಮಂದಿ ಶತಕೋಟ್ಯಾದೀಶರಿಗೆ ಸೇರಿದ್ದು. ಬಿಹಾರವು ಬಡತನದಿಂದ ಬಳಲುತ್ತಿರುವುದಕ್ಕೆ ಇದೇ ಕಾರಣ' ಎಂದು ಹೇಳಿದ್ದಾರೆ.

'ಮೋದಿ ನಾಟಕಗಳಿಗೆ ಮರುಳಾಗಬೇಡಿ'
'ಛತ್ ಪೂಜಾ ಸಂದರ್ಭದಲ್ಲಿ ಯಮುನಾ ನದಿಯಲ್ಲಿ ಪುಣ್ಯಸ್ನಾನ ಮಾಡುವುದಾಗಿ ಘೋಷಿಸುವ ಮೂಲಕ ಪ್ರಧಾನಿ ಮೋದಿ ಅವರು ನಾಟಕ ಮಾಡಲು ಬಯಸಿದ್ದನ್ನು ನೀವೆಲ್ಲ ತಿಳಿದಿರಬಹುದು. ಯುಮುನಾ ನದಿ ಪಕ್ಕದಲ್ಲೇ ನಿರ್ಮಿಸಿದ್ದ ಕೊಳದಲ್ಲಿ ಪೈಪ್‌ ಮೂಲಕ ನೀರು ತುಂಬಿಸಲಾಗಿದೆ ಎಂಬುದು ಬಹಿರಂಗವಾಗುತ್ತಿದ್ದಂತೆ ಮೋದಿ ಹಿಂದೆ ಸರಿದಿದ್ದಾರೆ' ಎಂದು ರಾಹುಲ್ ಕುಟುಕಿದ್ದಾರೆ.

'ನರೇಂದ್ರ ಮೋದಿಯ ನಾಟಕಗಳಿಗೆ ಮರುಳಾಗಬೇಡಿ' ಎಂದು ಮನವಿ ಮಾಡಿರುವ ರಾಹುಲ್‌, 'ಮತ ಗಳಿಸಬಹುದು ಎಂಬುದಾದರೆ, ಅವರು ವೇದಿಕೆ ಮೇಲೆ ನೃತ್ಯ ಮಾಡುವುದಕ್ಕೂ ಸಿದ್ಧ' ಎಂದು ತಿವಿದಿದ್ದಾರೆ.

ಕೆಲವು ರಾಜ್ಯಗಳಲ್ಲಿ ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಮತಕಳವು ನಡೆದಿದೆ ಎಂಬುದನ್ನು ಮತ್ತೊಮ್ಮೆ ಹೇಳಿದ ಕಾಂಗ್ರೆಸ್‌ ನಾಯಕ, ಬಿಹಾರದಲ್ಲೂ ಅದೇ ರೀತಿ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ಥಾನ ಖಾಲಿಯಿಲ್ಲ: ಶಾ
ದರ್ಬಾಂಗದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಮತ್ತು ರಾಹುಲ್‌ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.

ಲಾಲು ಅವರು, ತಮ್ಮ ಮಗ ತೇಜಸ್ವಿ ಅವರನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿಸಲು, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಪುತ್ರ ರಾಹುಲ್‌ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಕನಸು ಕಾಣುತ್ತಿದ್ದಾರೆ. ಆದರೆ, ಆ ಎರಡೂ ಸ್ಥಾನಗಳು ಖಾಲಿಯಿಲ್ಲ ಎಂದು ತಿವಿದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries