ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭ ಅಭ್ಯರ್ಥಿಯೊಬ್ಬರಿಗೆ ಲಂಚ ನೀಡಿರುವ ಪ್ರಕರಣ ಹೈಕೋರ್ಟು ಮೆಟ್ಟಿಲೇರುವುದರೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಮುಖಂಡ, ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಸುರೇಂದ್ರನ್ ಅವರಿಗೆ
ಹೈಕೋರ್ಟು ನೋಟೀಸು ಜಾರಿಗೊಳಿಸಿದೆ.
ವಿಚಾರಣೆಯಿಲ್ಲದೆ ಪ್ರಕರಣದ ಎಲ್ಲರನ್ನೂ ಆರೋಪಮುಕ್ತಗೊಳಿಸಿರುವುದರ ವಿರುದ್ಧ ಸರ್ಕಾರ ಸಲ್ಲಿಸಿದ ಅಪೀಲು ಸ್ವೀಕರಿಸಿದ ಜಸ್ಟಿಸ್ ವಿ.ಜಿ ಅರುಣ್ ಅವರು ಈ ನೋಟೀಸು ಜಾರಿಗೊಳಿಸಿದ್ದಾರೆ. ಸಿಪಿಎಂ ಮತ್ತು ಆರೆಸ್ಸೆಸ್ ನಡುವಿನ ಒಪ್ಪಂದದನ್ವಯ ಸುರೇಂದ್ರನ್ ಹಾಗೂ ಅವರ ಸಹಚರರನ್ನು ಆರೋಪಮುಕ್ತಗೊಳಿಸಿರುವುದಾಗಿ ಪ್ರತಿಪಕ್ಷವೂ ಆರೋಪಿಸಿತ್ತು. ಕೆಳ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಲೋಪವಿದೆಯೆಂದೂ, ಇದು ಕಾನೂನುನಿಗೆ ವಿರುದ್ಧವಾಗಿರುವುದಾಗಿಯೂ ಸರ್ಕಾರ ಅಪೀಲಿನಲ್ಲಿ ತನ್ನ ವಾದ ಮಂಡಿಸಿತ್ತು. ಅ. 30ರಂದು ನ್ಯಾಯಾಲಯ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಕೆ. ಸುರೇಂದ್ರನ್ ಅಲ್ಲದೆ ಬಿಜೆಪಿ ಕಾಸರಗೋಡು ಜಿಲ್ಲಾಸಮಿತಿ ಮಾಜಿ ಅಧ್ಯಕ್ಷ ವಿ. ಬಾಲಕೃಷ್ಣ ಶೆಟ್ಟಿಯುವಮೋರ್ಚಾದ ಸುನಿಲ್ ನಾಯ್ಕ್, ಕೆ. ಮಣಿಕಂಠ ರೈ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ. 2021ರ ರಾಝ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಕೆ. ಸುರೇಂದ್ರನ್ ಅವರು, ಬಿಎಸ್ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ. ಸುಂದರ ಅವರಿಗೆ ನಗದು, ಮೊಬೈಲ್ ಲಂಚದ ರೂಪದಲ್ಲಿ ನೀಡಿರುವ ಬಗ್ಗೆ ಕೇಸು ದಾಖಲಾಗಿತ್ತು. ನಂತರ ಪ್ರಕರಣದ ಎಲ್ಲ ಆರೋಪಿಗಳನ್ನು ಕೆಳ ನ್ಯಾಯಾಲಯ ಆರೋಪ ಮುಕ್ತಗೊಳಿಸಿತ್ತು.

