ಕೀವ್ : ದಕ್ಷಿಣ ಉಕ್ರೇನ್‌ನಲ್ಲಿರುವ (Ukraine) ಮಕ್ಕಳ ಆಸ್ಪತ್ರೆಯ (Childrens Hospital) ಮೇಲೆ ರಷ್ಯಾ (Russia) ಭೀಕರ ದಾಳಿ ನಡೆಸಿದ್ದು, ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2022 ರಲ್ಲಿ ರಷ್ಯಾದ ಪಡೆಗಳು ಆಕ್ರಮಿಸಿಕೊಂಡಿದ್ದ ಖೇರ್ಸನ್ ನಗರದಲ್ಲಿ ಈ ದಾಳಿ ನಡೆದಿದೆ. ರಷ್ಯಾ ತನ್ನ ಆಕ್ರಮಣದ ಸಮಯದಲ್ಲಿ ಹಲವಾರು ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನಾಶಪಡಿಸಿದೆ. ಆದರೆ ರಷ್ಯಾ ಮಾತ್ರ ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿದೆ.
'ಖೇರ್ಸನ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ದಾಳಿ ಮಾಡಿದೆ. ಒಂಬತ್ತು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ಕು ಮಕ್ಕಳು ಮತ್ತು ಮೂವರು ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ' ಎಂದು ಉಕ್ರೇನ್‌ನ ಅಧಿಕಾರಿ ಡಿಮಿಟ್ರೋ ಲುಬಿನೆಟ್ಸ್ ಹೇಳಿದರು.
ಕಟ್ಟಡದ ಒಡೆದ ಕಿಟಕಿಗಳು, ಆಸ್ಪತ್ರೆಯ ನೆಲದ ಮೇಲೆ ರಕ್ತದ ಕಲೆಗಳಿರೋ ವೀಡಿಯೊಗಳನ್ನು ಡಿಮಿಟ್ರೋ ಲುಬಿನೆಟ್ಸ್ ಶೇರ್ ಮಾಡಿದ್ದಾರೆ.
'ಆಸ್ಪತ್ರೆಗಳು ಮತ್ತು ಜನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮಾಡುವುದು ಯುದ್ಧವಲ್ಲ. ಇದು ಭಯೋತ್ಪಾದನೆಗೆ ಸಮರ. ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ' ಎಂದು ಉಕ್ರೇನ್‌ನ ಪ್ರಧಾನಿ ಯೂಲಿಯಾ ಸ್ವೈರಿಡೆಂಕೊ ಹೇಳಿದ್ದಾರೆ.
ಉಕ್ರೇನ್ನಲ್ಲಿ ವಿದ್ಯುತ್ ಕೊರತೆ
ರಷ್ಯಾದ ಸೇನೆ ಇಷ್ಟಕ್ಕೆ ಸುಮ್ಮನಾಗಿಲ್ಲ. ಉಕ್ರೇನ್‌ನ ಒಡೆಸಾದ ವಿವಿಧ ಭಾಗಗಳಲ್ಲಿ ದಾಳಿ ಮಾಡಲಾಗಿದೆ. ಇದರಿಂದ ವಿದ್ಯುತ್ ಕಡಿತಕ್ಕೆ ಉಂಟಾಗಿದೆ. ಒಡೆಸಾದಲ್ಲಿ ಸುಮಾರು 27,000 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಟೊಮಾಹಾಕ್ ಕ್ಷಿಪಣಿ ಪೂರೈಸಿದರೆ ಮತ್ತಷ್ಟು ದಾಳಿ
ಉಕ್ರೇನ್‌ಗೆ ಟೊಮಾಹಾಕ್ ಕ್ಷಿಪಣಿ ಪೂರೈಸಿದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಟ್ರಂಪ್ ಆಡಳಿತ ನಿರ್ಬಂಧ ಹೇರಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಪುಟಿನ್, ಉಕ್ರೇನ್‌ಗೆ ಟೊಮಾಹಾಕ್ ಕ್ಷಿಪಣಿ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ರಷ್ಯಾದ ಮೇಲೆ ಯಾವುದೇ ದಾಳಿ ವಿನಾಶಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.
ರಷ್ಯಾವನ್ನು ಗುರಿಯಾಗಿಸಿ ದಾಳಿ ನಡೆಸುವ ಯಾವುದೇ ಪ್ರಯತ್ನವನ್ನು ತಡೆಯುವ ಶಕ್ತಿ ನಮಗಿದೆ. ಆದರೆ, ಯುರೋಪ್ ಜೊತೆಗೂಡಿ ಅಮೆರಿಕ ಟೊಮಾಹಾಕ್ ಕ್ಷಿಪಣಿ ಸೇರಿದಂತೆ ಶಸ್ತ್ರಾಸ್ತ್ರ ಪೂರೈಸಿದರೆ ಪರಿಸ್ಥಿತಿ ವಿನಾಶಕಾರಿಯಾಗಿರುತ್ತದೆ ಎಂದು ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಬುಡಾಪೆಸ್ಟ್‌ನಲ್ಲಿ ನಡೆಯಬೇಕಿದ್ದ ಮಾತುಕತೆಯನ್ನು ಟ್ರಂಪ್ ರದ್ದುಗೊಳಿಸಿದ್ದರೂ, ಶಾಂತಿ ಮಾತುಕತೆಗೆ ರಷ್ಯಾ ಸಿದ್ಧವಿದೆ ಎಂದು ಪುಟಿನ್ ಹೇಳಿದ್ದಾರೆ. ಸಂಘರ್ಷವನ್ನು ಕೊನೆಗಾಣಿಸಲು ಮಾತುಕತೆಯೊಂದೇ ಪರಿಹಾರ. ಪ್ರಚೋದನೆ ನೀಡಿದರೆ ಸುಮ್ಮನಿರುವುದಿಲ್ಲ ಎಂದು ಪುಟಿನ್ ಎಚ್ಚರಿಸಿದ್ದಾರೆ.




