ಕಾಸರಗೋಡು: ಶಬರಿಮಲೆ ದೇಗುಲದ ಸ್ವರ್ಣಾಭರಣ ನಾಪತ್ತೆ ಸಂಬಂಧಿಸಿ ಸಿಬಿಐ ತನಿಖೆ ನಡೆಸುವಂತೆ ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಯ್ಯಪ್ಪ ಸ್ವಾಮಿಯ ಭಕ್ತರಾಗಿ ಪರಿವರ್ತನೆಯಾಗಿರು ಮುಜರಾಯಿ ಖಾತೆ ಸಚಿವರ ಅರಿವಿಗೆ ಬಾರದೆ ದೇಗುಲದ ಚಿನ್ನಾಭರಣ ಕಳವು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ವಿಷಯದಲ್ಲಿ ತಪ್ಪು ಮಾಡಿಲ್ಲ ಎಂದು ಖಚಿತವಿದ್ದಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ. 1999 ರಿಂದ ಶಬರಿಮಲೆಯ ಆದಾಯ, ಖರ್ಚು, ಬೆಳ್ಳಿ ಮತ್ತ ಚಿನ್ನದ ಒಟ್ಟು ಸಂಗ್ರಹದ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಕರಣದ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಕೆ.ಸಿ.ವೇಣುಗೋಪಾಲ್ ಚಕಾರವೆತ್ತದಿರುವುದು ಸಂಶಯಕ್ಕೆಡೆಮಾಡಿಕೊಡುತ್ತಿದೆ. ಈ ಬಗ್ಗೆ ಪ್ರತಿಪಕ್ಷ ತನ್ನ ನಿಲುವು ಸ್ಪಷ್ಟಪಡಿಸಬೇಕು. ಕುಂಬಳೆ ಶಾಲಾ ಕಲೋತ್ಸವದಲ್ಲಿ ನಡೆದ ಘರ್ಷಣೆ ಸಂಬಂಧಿಸಿ ಮಕ್ಕಳಲ್ಲಿ ಹಮಾಸ್ ಪರ ಅಭಿಪ್ರಾಯ ತುಂಬಿದವರು ಯಾರು ಎಂದು ಶಿಕ್ಷಣ ಸಚಿವ ಶಿವನ್ ಕುಟ್ಟಿ ತನಿಖೆ ನಡೆಸಬೇಕು ಎಂದು ಶೋಭಾ ಸುರೇಂದ್ರನ್ ಆಗ್ರಹಿಸಿದರು.
ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವುದು ಮತ್ತು ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು ಕಲೋತ್ಸವದ ಉದ್ದೇಶವಾಗಿದೆ. ಭಯೋತ್ಪಾದಕ ಸಂಘಟನೆ ಎಂದು ಜಗತ್ತು ಆರೋಪಿಸುತ್ತಿರುವ ಹಮಾಸ್ ಪರವಾಗಿ ನಿರ್ಣಯವನ್ನು ತೆಗೆದುಕೊಳ್ಳುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಗೆ ವಿರೋಧವಾಗಿ ವರ್ತಿಸಿರುವುದು ಖಂಡನೀಯ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಆಧ್ಯಕ್ಷೆ ಎಂಎಲ್.ಅಶ್ವಿನಿ ಉಪಸ್ಥಿತರಿದ್ದರು,

