ಕುಂಬಳೆ: ಅನಂತಪುರ ಕೈಗಾರಿಕಾ ಪ್ರಾಂಗಣದ ಪ್ಲೈವುಡ್ ಕಾರ್ಖಾನೆಯ ಬಾಯ್ಲರ್ ಸ್ಪೋಟಗೊಂಡು ಮೃತಪಟ್ಟ ಕಾರ್ಮಿಕನನ್ನು ಆಂಧ್ರಪ್ರದೇಶದ ನಜೀರುಲ್ ಆಲಿ(21)ಎಂದು ಗುರುತಿಸಲಾಗಿದೆ. ದುರಂತದಲ್ಲಿ ಇಪ್ಪತ್ತು ಮಂದಿ ಗಾಯಗೊಂಡಿದ್ದು, ಇವರಲ್ಲಿ ಐವರ ಸ್ಥಿತಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುಗಳು ಕುಂಬಳೆ ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ದುರಂತದ ಬಗ್ಗೆ ಪ್ಯಾಕ್ಟರೀಸ್ ಆ್ಯಂಡ್ ಬಾಯ್ಲರ್ಸ್ ಇಲಾಖೆಯ ಎರ್ನಾಕುಳಂ ವಿಭಾಗದ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ, ಘಟನೆಗೆ ಕಾರಣ ಪತ್ತೆಹಚ್ಚಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಅನಂತಪುರ ಸರೋವರ ದೇವಾಲಯದ ಅನತಿ ದೂರದಲ್ಲಿರುವ ಕಣ್ಣೂರು ಕುನ್ನಿಲ್ ಸನಿಹ ಕಾರ್ಯಾಚರಿಸುತ್ತಿರುವ ಡೆಕ್ಕೋರ್ ಪ್ಯಾನೆಲ್ ಇಂಡಸ್ಟ್ರೀಸ್‍ನ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಎರಡು ಬಾಯ್ಲರ್‍ಗಳಲ್ಲಿ ಒಂದು ಸ್ಪೋಟಗೊಂಡಿರುವುದು ದುರಂತಕ್ಕೆ ಕಾರಣವಾಗಿತ್ತು.


