ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಸೆ.22 ರಂದು ಆರಂಭಗೊಂಡ ಶರನ್ನವರಾತ್ರಿ ಮಹೋತ್ಸವ ಗುರುವಾರ ವಿಜಯದಶಮಿಯಂದು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ವಿವಿಧ ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಬೆಳಿಗ್ಗೆ ಶ್ರೀ ಗಾಯತ್ರೀ ಮಾತೆಗೆ 108 ಸೀಯಾಳಾಭಿಷೇಕ, ಬೆಳಗ್ಗಿನ ಪೂಜೆಯ ನಂತರ ತೆನೆಪೂಜೆ, ವಿದ್ಯಾರಂಭ ನಡೆದವು. ಬಳಿಕ ಶ್ರೀ ಮಠದ ಗಾಯತ್ರೀ ಮಂಟಪದಲ್ಲಿ ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ ವಿದುಷಿ ಸವಿತಾ ಜೀವನ್ ಇವರ ನಿರ್ದೇಶನದಲ್ಲಿ "ನಾಟ್ಯನಮನ" ಕಾರ್ಯಕ್ರಮ ವೈವಿಧ್ಯ ಪ್ರದರ್ಶನಗೊಂಡಿತು. ಮಧ್ಯಾಹ್ನ ಮಹಾ ಪೂಜೆಯ ನಂತರ ಶ್ರೀ ಮಠದ ನಕ್ಷತ್ರವನದಲ್ಲಿರುವ ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀ ಶಾರದಾ ವಿಸರ್ಜನೆ ಭವ್ಯ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಬಳಿಕ ಪರಮಪೂಜ್ಯರು ಭಕ್ತಾದಿಗಳಿಗೆ ಮಂಗಲಮಂತ್ರಾಕ್ಷತೆ ಅನುಗ್ರಹಿಸುವುದರೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡವು.



