ಬದಿಯಡ್ಕ: ಕಲೆ ನಿಂತ ನೀರಾಗಬಾರದೆ ಗುರುಶಿಷ್ಯ ಸಂಬಂಧ ಮುಂದುವರಿಯುತ್ತಾ ಸಾಗಿದಾಗ ಅನೇಕ ಕಲಾವಿದರ ಸೃಷ್ಟಿಯಾಗುತ್ತದೆ. ರಂಗಪ್ರವೇಶದ ನಂತರ ಕಲಾವಿದೆಯು ಇನ್ನಷ್ಟು ಜವಾಬ್ದಾರಿಯೊಂದಿಗೆ ತನ್ನ ಕಲಾಪ್ರೌಢಿಮೆಯನ್ನು ಶಿಷ್ಯಂದಿರಿಗೆ ಧಾರೆಯೆರೆಯಬೇಕು. ತನ್ಮೂಲಕ ಕ್ಷೇತ್ರ ಕಲೆಗಳಿಗೆ ಮತ್ತಷ್ಟು ಪ್ರೋತ್ಸಾಹವನ್ನು ನೀಡಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಶ್ರೀ ಎಡನೀರು ಮಠದಲ್ಲಿ ಗುರುವಾರ ವಿಜಯದಶಮಿಯ ಶುಭ ಸಂದರ್ಭದಲ್ಲಿ ರಾತ್ರಿ ವಿದುಷಿ ರೂಪಾ ವಿಘ್ನೇಶ್ ಕುಳಾಯಿ ಇವರ ಭರತನಾಟ್ಯ ರಂಗಪ್ರವೇಶದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಭಾರತೀಯ ಕಲೆಗಳು ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ. ಬಾಲ್ಯದಿಂದಲೇ ಮಕ್ಕಳನ್ನು ನಮ್ಮ ದೇಶೀಯ ಕಲಾಪ್ರಾಕಾರಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದಾಗ ಮುಂದೆ ಅವರು ಸದಾ ನಮ್ಮ ಸಂಸ್ಕøತಿಗೆ ಬದ್ಧರಾಗಿರುತ್ತಾರೆ ಎಂದರು.
ಶ್ರೀ ಎಡನೀರು ಸಂಸ್ಥಾನದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಕಲಾನಿಕೇತನದ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ.ರೈ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ನೃತ್ಯಗುರುಗಳಾದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ದಂಪತಿಗಳಿಗೆ ವಿದುಷಿ ರೂಪಾ ವಿಘ್ನೇಶ್ ಗುರುವಂದನೆ ಸಲ್ಲಿಸಿದರು. ವಿದುಷಿ ರೂಪಾ ವಿಘ್ನೇಶ್ ತನ್ನ ಅನಿಸಿಕೆಗಳನ್ನು ಹಂಚಿಕೊಂಡರು. ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬರೆಕರೆ ಸತ್ಯನಾರಾಯಣ ಭಟ್ ವಂದಿಸಿದರು. ಕಾರ್ತಿಕ್ ಪಡ್ರೆ ಕಾರ್ಯಕ್ರಮ ನಿರೂಪಿಸಿದರು. ರಂಗಪ್ರವೇಶಕ್ಕೆ ನಟುವಾಂಗದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ಹಾಡುಗಾರಿಕೆಯಲ್ಲಿ ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ವಸಂತ ಕುಮಾರ್ ಗೋಸಾಡ, ಮೃದಂಗದಲ್ಲಿ ಗೀತೇಶ್ ಕುಮಾರ್ ನೀಲೇಶ್ವರ, ಕೊಳಲಿನಲ್ಲಿ ರಾಹುಲ್ ಕಣ್ಣೂರು ಜೊತೆಗೂಡಿದರು.

.jpg)
