ಕಾಸರಗೋಡು: ಕಲೆ ಎಂಬುದು ಪ್ರತಿಭಾ ಪ್ರಧಾನವಾಗಿದ್ದು, ಮಾನವನ ಹೃದಯ ಸಂವೇದನೆ ಮತ್ತು ಪ್ರಜ್ಞಾ ಶಕ್ತಿಯಿಂದ ಅದು ಜಾಗೃತವಾಗಿರುತ್ತದೆ ಎಂಬುದಾಗಿ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ತಿಳಿಸಿದ್ದಾರೆ.
ಅವರು ನೃತ್ಯ ವಿದುಷಿ ಧನ್ಯ ಮುರಳಿ ಆಸ್ರ ಅವರು ಪರಕ್ಕಿಲ ಸನ್ನಿಧಿಯಲ್ಲಿ ಆರಂಭಿಸಲಾದ 'ಅಮೃತ ವರ್ಷಿಣಿ' ಭರತನಾಟ್ಯ ತರಗತಿ ಕೇಂದ್ರವನ್ನು ಉಧ್ಘಾಟಿಸಿ ಆಶೀರ್ವಚನ ನೀಡಿದರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಆಶೀರ್ವದಿಸಿದರು. ಕಲಾ ತಪಸ್ವಿ ಗುರು ಬಾಲಕೃಷ್ಣ ಮಂಜೇಶ್ವರ, ಎಡನೀರು ಉನ್ನತ ಫ್ರೌಢ ಶಾಲೆಯ ನಿವೃತ್ತ ಪ್ರಾಂಶುಪಾಲ ನಾರಾಯಣ ಉರ್ಲಂಗೋಡಿತ್ತಾಯ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉಪಸ್ಥಿತರಿದ್ದರು. ಸುಕನ್ಯಾ ಆಸ್ರ, ಶಶಿಕಲಾ ಉದಯ ಮಯ್ಯ ಉಪಸ್ಥಿತರಿದ್ದರು.
ವೈಷ್ಣವಿ ಮಯೂರ ಆಸ್ರ ಪ್ರಾರ್ಥನೆ ಹಾಡಿದರು. ಡಾ. ಶ್ರೀರಕ್ಷಾ ರಾಮಕಿಶೋರ್ ಆಸ್ರ ಸ್ವಾಗತಿಸಿದರು. ನೃತ್ಯ ವಿದುಷಿ ಧನ್ಯಾಮುರಳಿ ಆಸ್ರ ಕಾರ್ಯಕ್ರಮ ನಿರೂಪಿಸಿದರು. ಮುರಳಿ ಕೃಷ್ಣ ಆಸ್ರ ವಂದಿಸಿದರು.




