ಕುಂಬಳೆ: ಪೆರಿಯಡ್ಕ ಮಂಜೋಡಿ ನಿವಾಸಿ, ಗಲ್ಫ್ ಉದ್ಯೋಗಿ ಶರೀಪ್ ಅವರ ಪೆರ್ಮುದೆಯಲ್ಲಿರುವ ಮನೆ ಬಾಗಿಲು ಒಡೆದು ಒಂಬತ್ತೂಕಾಲು ಪವನು ಚಿನ್ನಾಭರಣ ಹಾಗೂ 10ಸಾವಿರ ರೂ. ಕಳವುಗೈಯಲಾಗಿದೆ. ಮನೆಯವರು ಸಂಬಂಧಿಕರಲ್ಲಿ ತೆರಳಿದ್ದ ಸಂದರ್ಭ ಮನೆ ಹಿಂಭಾಗದ ಕಬ್ಬಿಣದ ಸರಳು ತುಂಡರಿಸಿ, ಬಾಗಿಲು ಒಡೆದು ನುಗ್ಗಿ ಕಪಾಟಿನಲ್ಲಿರಿಸಿದ್ದ ನಗ, ನಗದು ದೋಚಲಾಗಿದೆ. ಶರೀಪ್ ದುಬೈಯಲ್ಲಿ ಉದ್ಯೋಗದಲ್ಲಿದ್ದು, ಇವರ ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಂಬಂಧಿಕರ ಮನೆಯಿಂದ ಭಾನುವಾರ ಸಂಜೆ ಮನೆಗೆ ವಾಪಸಾದಾಗ ಕಳವು ಬೆಳಕಿಗೆ ಬಂದಿದೆ. ಕಪಾಟಿನಲ್ಲಿರಿಸಿದ್ದ ಸಮಗ್ರಿ ಚಲ್ಲಾಪಿಲ್ಲಿಗೊಳಿಸಲಾಗಿದೆ. ಮನೆ ಬಾಗಿಲು ಒಡೆಯಲು ಬಳಸಿದ್ದರೆನ್ನಲಾದ ಕಬ್ಬಿಣದ ಸಲಾಕೆಯೊಂದನ್ನು ಮನೆ ವಠಾರದಿಂದ ಪತ್ತೆಹಚ್ಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶೆರೀಪ್ ಅವರ ಪತ್ನಿ ರುಕ್ಸಾನಾ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಘಟನೆ ನಡೆದ ಸ್ಥಳ ಬದಿಯಡ್ಕ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ ನಂತರ ಬದಿಯಡ್ಕ ಠಾಣೆ ಪೊಲೀಸರು ಬೆರಳಚ್ಚು, ಶ್ವಾನದಳದೊಂದಿಗೆ ತಪಾಸಣೆ ನಡೆಸಿದರು.




