ಕಾಸರಗೋಡು: ಸಂಚರಿಸುತ್ತಿದ್ದ ರೈಲಿಗೆ ಇಟ್ಟಿಗೆ ಎಸೆದ ಪರಿಣಾಮ ರೈಲು ಪ್ರಯಾಣಿಕ, ಕಾಸರಗೋಡಿನ ಬಳಾಲ ನಿವಾಸಿ ಎ.ಜೆ ಶಬಿ ಎಂಬವರು ಗಾಯಗೊಂಡಿದ್ದಾರೆ. ಚೆನ್ನೈಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರೈಲುಗಾಡಿಗೆ ಮಲಪ್ಪುರಂ ಫರೋಕ್-ಕಲ್ಲಾಯಿ ಹಾದಿ ಮಧ್ಯೆ ಇಟ್ಟಿಗೆ ಎಸೆಯಲಾಗಿದೆ. ಈ ಸಂದರ್ಭ ರೈಲಿನ ಜನರಲ್ ಬೋಗಿಯ ಕಿಟಿಕಿ ಸೈಡಿಗೆ ಕುಳಿತಿದ್ದ ಶಿಬಿ ಅವರ ಕಿವಿಯ ಭಾಗಕ್ಕೆ ಗಾಯಗಳುಂಟಾಗಿದೆ. ಗಾಯಾಳುವನ್ನು ನಂತರ ಕೋಯಿಕ್ಕೋಡು ರೈಲ್ವೆ ನಿಲ್ದಾಣದಲ್ಲಿಇಳಿಸಿ, ಸನಿಹದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಯಿತು. ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ರೈಲಿಗೆ ಇಟ್ಟಿಗೆ ಎಸೆದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.




