ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿ ಡಿಜಿಟಲೀಕರಣಗೊಂಡ ದಾಖಲೆಗಳ ಹಸ್ತಾಂತರ ಮತ್ತು ಕಳೆದ 5 ವರ್ಷಗಳಲ್ಲಿ ಪಂಚಾಯತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ವೀಡಿಯೋ ಬಿಡುಗಡೆ ಹಾಗೂ ಲೈಫ್ ಭವನ ಪದ್ಧತಿಯ ನೂತನ ಫಲಾನುಭವಿಗಳಿಗೆ ಮಾಹಿತಿ ಕಾರ್ಯಕ್ರಮ ಮಂಜೇಶ್ವರ ಗೋವಿಂದ ಪೈ ಗಿಳಿವಿಂಡುನಲ್ಲಿ ನಡೆಯಿತು. ಮಂಜೇಶ್ವರ ಗ್ರಾಮ ಪಂಚಾಯತಿಯ ಆಡಳಿತಾತ್ಮಕ ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಸೇವಾ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಮಂಜೇಶ್ವರ ಗ್ರಾಮ ಪಂಚಾಯತಿ ಡಿಜಿಟಲೀಕರಣಗೊಂಡ ದಾಖಲೆಗಳ ಹಸ್ತಾಂತರ ನಡೆಯಿತು.
ಪಂಚಾಯತಿಯ ಭೂ ದಾಖಲೆಗಳು, ತೆರಿಗೆ ದಾಖಲೆಗಳು, ಯೋಜನಾ ದಾಖಲೆಗಳು ಮತ್ತು ಪಂಚಾಯತಿ ಆಡಳಿತಾತ್ಮಕ ನಿರ್ಣಯಗಳನ್ನು ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಗಿದೆ. ಈ ಕಾರ್ಯದ ಮೂಲಕ ನಾಗರಿಕರಿಗೆ ಆನ್‍ಲೈನ್ ನಲ್ಲಿ ದಾಖಲೆಗಳ ಪ್ರಾಪ್ತಿಯನ್ನು ಸುಗಮಗೊಳಿಸಲಾಗಿದೆ. ದಾಖಲೆ ಸಂರಕ್ಷಣೆ, ಪಾರದರ್ಶಕತೆ ಮತ್ತು ಆಡಳಿತಾತ್ಮಕ ವೇಗ ಹೆಚ್ಚಿಸಲು ಇದು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆ "ಡಿಜಿಟಲ್ ಪಂಚಾಯತಿ" ಕನಸಿನತ್ತ ಒಂದು ದೃಢ ಹೆಜ್ಜೆಯಾಗಿ ಮಾರ್ಪಾಟಾಗಿದೆ.
ಕಳೆದ ಐದು ವರ್ಷಗಳಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ ನಡೆದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ವೀಡಿಯೋ ರೂಪದಲ್ಲಿ ಸಂಗ್ರಹಿಸಿ ಬಿಡುಗಡೆ ಮಾಡಲಾಯಿತು.
ವೀಡಿಯೋದಲ್ಲಿ ರಸ್ತೆ, ಕುಡಿಯುವ ನೀರು, ಸ್ಯಾನಿಟೇಷನ್, ವಿದ್ಯುತ್, ಶಿಕ್ಷಣ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ನಡೆದ ಸಾಧನೆಗಳ ದೃಶ್ಯಾವಳಿಗಳು ಒಳಗೊಂಡಿದೆ. ಈ ವೀಡಿಯೋ ಜನರಿಗೆ ಪಂಚಾಯತಿಯ ಕಾರ್ಯಯೋಜನೆ ಹಾಗೂ ಅಭಿವೃದ್ಧಿ ಪ್ರಯತ್ನಗಳ ಬಗ್ಗೆ ನೈಜ ಚಿತ್ರಣ ನೀಡುತ್ತದೆ.
ಲೈಫ್ ಮಿಷನ್ ಯೋಜನೆಯಡಿ ಮನೆ ಪಡೆದ ನೂತನ ಫಲಾನುಭವಿಗಳಿಗೆ ಯೋಜನೆಯ ಅಡಿಯಲ್ಲಿ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಮನೆ ನಿರ್ಮಾಣದ ಗುಣಮಟ್ಟ, ಹಣ ಬಿಡುಗಡೆ ಪ್ರಕ್ರಿಯೆ, ಮತ್ತು ಸರಿಯಾದ ದಾಖಲೆಗಳ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಫಲಾನುಭವಿಗಳ ಶ್ರೇಯೋಭಿವೃದ್ಧಿಗಾಗಿ ಪಂಚಾಯತಿಯ ಮುಂದಿನ ಯೋಜನೆಗಳ ಕುರಿತು ವಿವರಿಸಲಾಯಿತು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಅವರು ಮಾತನಾಡಿ ಕಳೆದ ಐದು ವರ್ಷದಲ್ಲಿ ನಮ್ಮ ಆಡಳಿತದಲ್ಲಿ ಮಂಜೇಶ್ವರದಲ್ಲಿ ಹಲವು ಅಭಿವೃದ್ದಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.
ಮಂಜೇಶ್ವರ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಯಾದವ ಬಡಾಜೆ ಮಾತನಾಡಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಜನ ಪ್ರತಿನಿಧಿಗಳಾದ ಗೋಲ್ಡನ್ ಅಬ್ದುಲ್ ರಹ್ಮಾನ್, ಕಮಲಾಕ್ಷಿ, ಹನೀಫ್, ಶಂಶೀನಾ, ಹಮೀದ್, ಸಫಾ ಫಾರೂಕ್, ರಾಧಾ ಎಂ, ಸುಪ್ರಿಯಾ ಶೆಣೈ, ಮುಶ್ರತ್ ಜಹಾನ್, ಮುಸ್ತಫಾ, ರಾಜೇಶ್, ಗ್ರಾಮ ಪಂಚಾಯತಿ ಸದಸ್ಯರುಗಳು, ವಿವಿಧ ಸಂಘಟನಾ ನೇತಾರರರು, ರಾಜಕೀಯ ನೇತಾರರು ಪಾಲ್ಗೊಂಡರು. ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್ ಸ್ವಾಗತಿಸಿ, ವಂದಿಸಿದರು.




.jpg)
