ಕಾಸರಗೋಡು: ಬೇರೊಬ್ಬ ಮಹಿಳೆಗೆ ಮಾರಾಟಗೈದಿದ್ದ ಒಂದು ತಿಂಗಳು ಪ್ರಾಯದ ಗಂಡು ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪೊಲೀಸರ ಸಹಾಯದಿಂದ ನೀರ್ಚಾಲಿನ ಮನೆಯೊಂದರಿಂದ ಪತ್ತೆಹಚ್ಚಲಾಗಿದೆ. ತಾಯಿ ಮತ್ತು ಮಗುವನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ನಂತರ ಮಗುವನ್ನು ಚೈಲ್ಡ್‍ಹೋಮ್ ಹಾಗೂ ತಾಯಿಯನ್ನು ಸಿಡಬ್ಲ್ಯೂಸಿಗೆ ಹಸ್ತಾಂತರಿಸಿದ್ದಾರೆ.
ಕುಂಬಳೆ ಸನಿಹದ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿರುವ ಯುವತಿಯ ಪತಿ ಈ ಹಿಂದೆ ನಿಧನರಾಗಿದ್ದು, ಈ ಸಂಬಂಧದಲ್ಲಿ ಮಕ್ಕಳಿದ್ದಾರೆ. ನಂತರ ವಿಧವೆಗೆ ಮಂಗಳೂರಿನಲ್ಲಿ ಹೋಟೆಲ್ ಕಾರ್ಮಿಕನಾಗಿರುವ ವ್ಯಕ್ತಿ ಜತೆ ಮದುವೆಯಾಗಿದೆ. ಎರಡನೇ ಪತಿಗೂ ಮೊದಲ ಸಂಬಂಧದಲ್ಲಿ ಇಬ್ಬರು ಮಕ್ಕಳಿದ್ದಾರೆ. ಈ ಮಧ್ಯೆ ಯುವತಿ ಮತ್ತೆ ಗರ್ಭಿಣಿಯಾಗಿದ್ದು, ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಮಗುವನ್ನು ಮಕ್ಕಳಿಲ್ಲದ ಮಹಿಳೆಯೊಬ್ಬರಿಗೆ ನೀಡಿದ್ದರು. ಹೆರಿಗೆಗಾಗಿ ಮಂಗಳೂರಿನ ಆಸ್ಪತ್ರೆಗೆ ತೆರಳಿ, ವಾಪಸಾಗುವಾಗ ಮಗು ಇಲ್ಲದಿರುವುದರಿಂದ ಸಂಶಯಗೊಂಡು ಸ್ಥಳೀಯರು ವಿಚಾರಿಸಿದಾಗ ಮಗು ಅಸೌಖ್ಯದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಗರ್ಭಿಣಿಯಾಗಿದ್ದ ಸಂದರ್ಭ ಮನೆಗೆ ಭೇಟಿ ನೀಡುತ್ತಿದ್ದ ಆರೋಗ್ಯ ಸಹಾಯಕರು ಮತ್ತೆ ಮನೆಗೆ ಆಗಮಿಸಿ ಮಹಿಳೆಯ ಹೇಳಿಕೆ ಸಂಗ್ರಹಿಸುವ ಮಧ್ಯೆ ಸಂಶಯಗೊಂಡು ಮತ್ತಷ್ಟು ತನಿಖೆಗೊಳಪಡಿಸಿದಾಗ ಮಗುವನ್ನು ಮಾರಾಟ ಮಾಡಿರುವ ವಿಷಯ ಬಹಿರಂಗಗೊಂಡಿತ್ತು. ಮಗುವನ್ನು ಹಣ ಕೊಟ್ಟು ಪಡೆದುಕೊಂಡಿರುವುದಾಗಿ ಮಗುವನ್ನು ಪಡೆದುಕೊಂಡಿರುವ ಮಹಿಳೆ ಅಧಿಕಾರಿಗಳಲ್ಲಿ ತಿಳಿಸಿದ್ದಾರೆ.

