ವಾಷಿಂಗ್ಟನ್: ಅಮೆರಿಕಾದಲ್ಲಿ ಆರ್ಥಿಕ ವರ್ಷ ಅಕ್ಟೋಬರ್ 1ರಿಂದ ಆರಂಭಗೊಳ್ಳಲಿದ್ದು ಫೆಡರಲ್ ಸರಕಾರಕ್ಕೆ ಧನ ಸಹಾಯಕ್ಕಾಗಿ ಅಲ್ಪಾವಧಿಯ ಬಜೆಟ್‍ಗೆ ಸಂಸತ್ತಿನ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಟ್ರಂಪ್ ಸರಕಾರ ಮತ್ತು ವಿಪಕ್ಷ ಡೆಮಾಕ್ರಟಿಕ್ ಸದಸ್ಯರ ನಡುವೆ ನಡೆದ ಮಾತುಕತೆಯಲ್ಲಿ ಪ್ರಗತಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಸರಕಾರದ ಕಾರ್ಯ ಸ್ಥಗಿತಗೊಳ್ಳುವ ಅಪಾಯವಿದೆ ಎಂದು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷ ನಿಲುವು ಸಡಿಲಿಸದ ಕಾರಣ ಸರಕಾರದ ಕಾರ್ಯಸ್ಥಗಿತಗೊಳ್ಳುವ ಅಪಾಯ ಹೆಚ್ಚಿದೆ ಎಂದು ವ್ಯಾನ್ಸ್ ಆರೋಪಿಸಿದ್ದಾರೆ. ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಪ್ರಸ್ತುತ ಖರ್ಚು ಮಟ್ಟಗಳ ಅಲ್ಪಾವಧಿ ವಿಸ್ತರಣೆಯನ್ನು ಬಯಸುತ್ತಿದ್ದರೆ ಡೆಮಾಕ್ರಟಿಕ್ ಪಕ್ಷ ಇದನ್ನು ವಿರೋಧಿಸುತ್ತಿದೆ. ಕಡಿಮೆ ಆದಾಯದ ವ್ಯಕ್ತಿಗಳಿಗೆ ಸರಕಾರದ ಆರೋಗ್ಯ ವಿಮಾ ಸಬ್ಸಿಡಿಗಳನ್ನು ನವೀಕರಿಸಲು ದೃಢವಾದ ಒಪ್ಪಂದವನ್ನು ಡೆಮಾಕ್ರಟಿಕ್ ಸದಸ್ಯರು ಆಗ್ರಹಿಸುತ್ತಿದ್ದಾರೆ.




