ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬಾರ್‍ನಲ್ಲಿ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ನಡೆಸಿದ ಪ್ರಕರಣದಲ್ಲಿ ನಿಗೂಢತೆ ಹೆಚ್ಚಾಗುತ್ತಿದೆ. ಕಡಂಬಾರು ಚೆಂಬುಪದವು ನಿವಾಸಿ ಅಜಿತ್(35)ಹಾಗೂ ಇವರ ಪತ್ನಿ, ಖಾಸಗಿ ಶಾಲಾ ಶಿಕ್ಷಕಿ ಶ್ವೇತಾ(28)ಸೋಮವಾರ ವಿಷ ಸೇವಿಸಿದ್ದು, ಮಂಗಳವಾರ ಇಬ್ಬರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ದಂಪತಿ ಸಾವಿಗೀಡಾಗುವ ಎರಡು ದಿವಸಗಳ ಹಿಂದೆ ಸ್ಕೂಟರಲ್ಲಿ ಆಗಮಿಸಿದ್ದ ಮಹಿಳೆಯರಿಬ್ಬರು ಶ್ವೇತಾ ಅವರನ್ನು ಥಳಿಸುತ್ತಿರುವ ದೃಶ್ಯ ಮನೆ ಸನಿಹದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಕೂಟರಲ್ಲಿ ಆಗಮಿಸಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆ ಸ್ಕೂಟರಲ್ಲೇ ಕುಳಿತಿದ್ದರೆ, ಇನ್ನೊಬ್ಬಾಕೆ ಶ್ವೇತಾ ಅವರನ್ನು ಬಲವಾಗಿ ಥಳಿಸುತ್ತಿರುವುದು ಸೆರೆಯಾಗಿದೆ. ಶ್ವೇತಾ ಅವರನ್ನು ಥಳಿಸಿರುವ ಇಬ್ಬರು ಮಹಿಳೆಯರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರ್ಥಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ, ಮಹಿಳೆಯರಿಬ್ಬರು ಹಣದ ವಿಚಾರಕ್ಕೆ ಸಂಬಂಧಿಸಿ ಥಳಿಸಿದ್ದಾರೆಯೇ ಎಂಬ ವಿಚಾರ ಪೊಲೀಸ್ ತನಿಖೆಯಿಂದ ಬಹಿರಂಗಗೊಳ್ಳಬೇಕಾಗಿದೆ.
ಅಜಿತ್ ಅವರು ತಮ್ಮ ಮೂರು ವರ್ಷ ಪ್ರಾಯದ ಗಂಡು ಮಗುವನ್ನು ಬಂದ್ಯೋಡಿನಲ್ಲಿರುವ ಸಹೋದರಿ ಮನೆಯಲ್ಲಿ ಬಿಟ್ಟು, ತನಗೆ ಬೇರೆ ಕೆಲಸಕ್ಕೆ ತೆರಳಲಿದ್ದು, ವಾಪಾಸು ಬರುವಲ್ಲಿಯವರೆಗೆ ಪುತ್ರ ಇಲ್ಲಿ ಆಟವಾಡುತ್ತಿರಲಿ ಎಂದು ತಿಳಿಸಿ ಮನೆ ಕಡೆ ತೆಳಿದ್ದು, ನಂತರ ಇಬ್ಬರೂ ವಿಷ ಸೇವಿಸಿದ್ದಾರೆನ್ನಲಾಗಿದೆ.




