ಕೀವ್: ಉಕ್ರೇನ್ ಮೇಲೆ ಶನಿವಾರ ಮುಂಜಾನೆವರೆಗೂ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಬಳಸಿ ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟು, 16 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಕೀವ್‌ನಲ್ಲಿ ಇಬ್ಬರು ಸಾವಿಗೀಡಾಗಿದ್ದು, ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ಹಲವು ಕಟ್ಟಡಗಳಿಗೆ ಭಾರಿ ಹಾನಿಯಾಗಿದೆ ಎಂದು ನಗರ ಸೇನಾ ಆಡಳಿತದ ಮುಖ್ಯಸ್ಥ ತೈಮುರ್ ಕಾಚೆಂಕೊ ತಿಳಿಸಿದ್ದಾರೆ.
ನಿಪ್ರೊಪೆಟ್ರೋವ್‌ಸ್ಕ್ ಪ್ರಾಂತ್ಯದಲ್ಲಿ ಇಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ಅಪಾರ್ಟ್‌ಮೆಂಟ್ ಸೇರಿ ಹಲವು ಕಟ್ಟಡ ಮತ್ತು ವಾಹನಗಳಿಗೂ ಹಾನಿಯಾಗಿದೆ ಎಂದು ಸ್ಥಳೀಯ ಗವರ್ನರ್ ವ್ಲಾಡಿಸ್ಲಾವ್ ಹೈವನಿಂಕೊ ತಿಳಿಸಿದ್ದಾರೆ.
ರಷ್ಯಾ 9 ಕ್ಷಿಪಣಿ ಮತ್ತು 62 ಡ್ರೋನ್‌ಗಳನ್ನು ಬಳಸಿತ್ತು. 4 ಕ್ಷಿಪಣಿ ಮತ್ತು 50 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ. ಮತ್ತೊಂದೆಡೆ ಉಕ್ರೇನ್‌ನ 121 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾಗಿ ರಷ್ಯಾ ರಕ್ಷಣಾ ಇಲಾಖೆ ಹೇಳಿಕೊಂಡಿದೆ.
ಮನವಿ: ತನಗೆ ಸೇನಾ ನೆರವು ನೀಡಿರುವ ಐರೋಪ್ಯ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಲಂಡನ್‌ನಲ್ಲಿದ್ದ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ, ಶಕ್ತಿಶಾಲಿ ಟೊಮಹಾಕ್ ಕ್ಷಿಪಣಿಗಳನ್ನು ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮನವಿ ಮಾಡಿದ್ದಾರೆ.




