ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಸಂಕಷ್ಟ ಪರಿಹರಿಸುವಲ್ಲಿ ಸರ್ಕಾರ ತೋರುವ ನಿರ್ಲಕ್ಷ್ಯ ಪ್ರತಿಭಟಿಸಿ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರೊಕ್ಕೂಟ ಕಾಸರಗೋಡು ಜಿಲ್ಲಾಧಿಕಾರಿ ಚೇಂಬರ್ ಎದುರು ಧರಣಿ ನಡೆಸಿತು.
ಎಂಡೋಸಲ್ಫಾನ್ ದುಷ್ಪರಿಣಾಮಪೀಡತರಾಗಿರುವ 1031ಮಂದಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗಿಸುವಂತೆ ಆಗ್ರಹಿಸಿ ಸಂತ್ರಸ್ತರನ್ನು ಒಟ್ಟುಸೇರಿಸಿ ಅವರ ಪೋಷಕರು ಧರಣಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿರುವ ಭರವಸೆ ಇದುವರೆಗೆ ಈಡೇರಿಸಿಲ್ಲ. ಕಾಸರಗೋಡು ಪ್ಯಾಕೇಜ್‍ನಲ್ಲಿ ಒಳಪಡಿಸಿ ಎಂಡೋಸಲ್ಫಾನ್ ಪಟ್ಟಿಯಲ್ಲಿರುವ 1031 ಮಂದಿಗೆ ಚಿಕಿತ್ಸೆ ಲಭ್ಯವಾಗಿಸುವುದಾಗಿ ನೀಡಿದ್ದ ಭರವಸೆ ಒಂದುವರೆ ವರ್ಷ ಕಳೆದರೂ ಈಡೇರಿಲ್ಲ ಎಂದು ಸಂತ್ರಸ್ತರ ತಾಯಂದಿರು ಅಳಲತ್ತುಕೊಳ್ಳುತ್ತಿದ್ದಾರೆ.
2013ರಲ್ಲಿ ನಡೆದ ವಿಶೇಷ ವ್ಯದ್ಯಕೀಯ ತಪಾಸಣಾ ಶಿಬಿರದಲ್ಲಿ ಒಟ್ಟು 1905ಮಂದಿ ಸಂತ್ರಸ್ತರನ್ನು ಪತ್ತೆಹಚ್ಚಲಾಗಿದ್ದು, ಇವರಲ್ಲಿ ಹಂತ ಹಂತವಾಗಿ ಚಿಕಿತ್ಸೆಗಾಗಿ ಪಟ್ಟಿಗೆ ಸೇರ್ಪಡೆಗೊಳಿಸುತ್ತಾ ಬರಲಾಗಿದ್ದು, ಇನ್ನೂ 1031ಮಂದಿ ಬಾಕಿಯಿದ್ದಾರೆ. ಜಿಲ್ಲಾಧಿಕಾರಿಯನ್ನು ಭೇಟಿಮಾಡಿದ ಸಂತ್ರಸ್ತರ ತಾಯಂದಿರು, ಅಸೌಖ್ಯಪೀಡಿತ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುವಂತೆ ಅಂಗಾಲಾಚುವ ದೃಶ್ಯ ಮನಕಲಕುವಂತಿತ್ತು.

