ನವದೆಹಲಿ: ಕರೂರು ಕಾಲ್ತುಳಿತದ ತನಿಖೆಯನ್ನು ಕೇಂದ್ರ ತನಿಖಾ ದಳ(ಸಿಬಿಐ) ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸೆಪ್ಟೆಂಬರ್ 27ರಂದು ಕರೂರಿನ ವೇಲುಸ್ವಾಮಿಪುರಂನಲ್ಲಿ 'ತಮಿಳಿಗ ವೆಟ್ರಿ ಕಳಗಂ'(ಟಿವಿಕೆ) ಪಕ್ಷದ ರ್‍ಯಾಲಿಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಕಾಲ್ತುಳಿತ ನಡೆದ ಸ್ಥಳಕ್ಕೆ ಸಿಬಿಐ ತಂಡ ಈಗಾಗಲೇ ಭೇಟಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.ಪ್ರಕರಣದ ಎಸ್‌ಐಟಿ ತನಿಖೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಟಿವಿಕೆ, ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿತ್ತು. ಎಸ್‌ಐಟಿಯಲ್ಲಿ ತಮಿಳುನಾಡಿನ ಪೊಲೀಸರು ಮಾತ್ರ ಇರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೇಳಿತ್ತು.
ಟಿವಿಕೆ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್, ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ತನಿಖೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸಮಿತಿಯನ್ನೂ ರಚಿಸಿತ್ತು.




