ಕಾಸರಗೋಡು: ಸಿಪಿಎಂ ನೇತಾರನಾಗಿರುವ ತಂದೆ, ತನ್ನನ್ನು ಗೃಹಬಂಧನದಲ್ಲಿರಿಸಿ ಥಳಿಸುತ್ತಿರುವುದಲ್ಲದೆ, ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ 35ರ ಹರೆಯದ ಮಹಿಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಸಿಪಿಎಂ ಕಾಸರಗೋಡು ಉದುಮ ಏರಿಯಾ ಸಮಿತಿ ಸದಸ್ಯರೊಬ್ಬರ ಪುತ್ರಿ ಸಂಗೀತಾ ತನ್ನ ತಂದೆ ಹಾಗೂ ಕುಟುಂಬದವರ ವಿರುದ್ಧ ಈ ದೂರು ಸಲ್ಲಿಸಿದ್ದಾರೆ. ಅನ್ಯ ಮತೀಯ ಯುವಕನೊಂದಿಗೆ ವಿವಾಹವಾಗುವ ತನ್ನ ಇಚ್ಛೆಯನ್ನು ಮನೆಯವರಲ್ಲಿ ತಿಳಿಸಿದ ನಂತರ ಕಿರುಕುಳ ಆರಂಭಗೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ವಾಹನ ಅಪಘಾತವೊಂದರಲ್ಲಿ ಗಾಯಗೊಂಡು ಸೊಂಟದಿಂದ ಕೆಳಭಾಗಕ್ಕೆ ಶಕ್ತಿ ಕಳೆದುಕೊಂಡಿರುವ ಸಂಗೀತಾ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದು, ತನ್ನ ಆಗ್ರಹ ತಿಳಿಸಿದ ನಂತರ ತನ್ನನ್ನು ಗೃಹಬಂಧನದಲ್ಲಿರಿಸಿ ಚಿಕಿತ್ಸೆಯನ್ನೂ ನಿಲ್ಲಿಸಲಾಗಿದೆ. ಅಲ್ಲದೆ ತನಗೆ ವಿವಾಹ ವಿಚ್ಛೇದನದಿಂದ ಲಭಿಸಿದ ಮೊತ್ತವನ್ನು ತಂದೆ ಹಾಗೂ ಸಹೋದರ ಕೈವಶವಿರಿಸಿಕೊಂಡಿದ್ದಾರೆ. ಇತರ ರಾಜ್ಯದ ಯುವಕನೊಬ್ಬನನ್ನು ವಿವಾಹವಾಗುವ ತನ್ನ ಇಂಗಿತ ವ್ಯಕ್ತಪಡಿಸಿದ ನಂತರ ಕಿರುಕುಳ ಹೆಚ್ಚಾಗಿದೆ. ತನ್ನನ್ನು ಆತ್ಮಹತ್ಯೆಗೂ ಪ್ರೇರೇಪಿಸುತ್ತಿದ್ದಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.




