ಕಾಸರಗೋಡು: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಮೀಸಲು ಕ್ಷೇತ್ರಗಳಿಗೆ ಚೀಟಿ ಎತ್ತುವ ಪ್ರಕ್ರಿಯೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಜರುಗಿತು. ಮೂರನೇ ವಿಭಾಗ ಬದಿಯಡ್ಕ ಪರಿಶಿಷ್ಟ ಜಾತಿ ಹಾಗೂ 8ನೇ ವಿಭಾಗ ಕಯ್ಯೂರು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ. 4ನೇ ದೇಲಂಪಾಡಿ, 6ನೇ ವಿಭಾಗ ಕಲ್ಲಾರ್, 7ನೇ ವಿಭಾಗ ಚಿತ್ತಾರಿಕ್ಕಲ್, 10ನೇ ವಿಭಾಗ ಚೆರ್ವತ್ತೂರು, 12ನೇ ವಿಭಾಗ ಪೆರಿಯ, 13ನೇ ವಿಭಾಗ ಬೇಕಲ, 14ನೇ ವಿಭಾಗ ಉದುಮ, 15ನೇ ವಿಭಾಗ ಚೆಂಗಳ, 18ನೇ ವಿಭಾಗ ಮಂಜೇಶ್ವರವನ್ನು ಮಹಿಳಾ ಮೀಸಲಾತಿ ವಿಭಾಗವಾಗಿ ಘೋಷಿಸಲಾಗಿದೆ.
ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯಾಡಳಿತ ಇಲಾಖೆ ಉಪನಿರ್ದೇಶಕ ಕೆ.ವಿ. ಹರಿದಾಸ್, ಹಿರಿಯ ಅಧೀಕ್ಷಕ ಹಂಸ, ತಹಶೀಲ್ದಾರ್‍ಗಳಾದ ಎಲ್.ಕೆ. ಸುಬೈರ್, ಕೆ.ವಿ. ಬಿಜು, ಟಿ.ವಿ. ಸಜೀವನ್ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಮೂಲಕ ವಿವಿಧ ಗ್ರಾಮ ಪಂಚಾಯತ್‍ಗಳು, ನಗರಸಭೆಗಳು, ಬ್ಲಾಕ್ ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗೆ ಮೀಸಲಾತಿ ವಾರ್ಡ್‍ಗಳ ಚೀಟಿಎತ್ತುವ ಪ್ರಕ್ರಿಯೆ ಪೂರ್ತಿಗೊಂಡಿದೆ.




