ಕುಂಬಳೆ: ಅಸೌಖ್ಯ ಬಾಧಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ ಹಿನ್ನೆಲೆಯಲ್ಲಿ ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುವ ಮಧ್ಯೆ ಶರೀರದಲ್ಲಿ ಕಂಡುಬಂದ ಚಲನೆ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಮತ್ತೆ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.
ಕುಂಬಳೆ ಕಂಚಿಕಟ್ಟೆ ರಾಮನಗರ ನಿವಾಸಿ ರಾಮನಾಥ ಗಟ್ಟಿ(70)ಮರುಜನ್ಮ ಪಡೆದ ವ್ಯಕ್ತಿ!
ವಾರದ ಹಿಂದೆ ರಾಮನಾಥ ಗಟ್ಟಿ ಅವರನ್ನು ಅಸೌಖ್ಯಬಾಧಿಸಿದ್ದ ಹಿನ್ನೆಲೆಯಲ್ಲಿ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿ, ಉನ್ನತ ಚಿಕಿತ್ಸೆಗಾಗಿ ಮಂಗಳೂರು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಾಮನಾಥ ಗಟ್ಟಿ ಅವರ ಸ್ಥಿತಿ ಶೋಚನೀಯಾವಸ್ಥೆಯಲ್ಲಿದ್ದು, ಆಕ್ಸಿಜನ್ ಮಾಸ್ಕ್ ತೆರವುಗೊಳಿಸಿದಲ್ಲಿ ಜೀವ ಹೋಗಬಹುದೆಂದು ತಿಳಿಸಿದ್ದ ಹಿನ್ನೆಲೆಯಲ್ಲಿ ವೈದ್ಯರ ಶಿಫಾರಸುಮೇರೆಗೆ ಮನೆಗೆ ಕರೆತರಲಾಗಿತ್ತು. ಚಿಕಿತ್ಸಾ ವೆಚ್ಚವಾಗಿ ಒಂದು ಲಕ್ಷ ರೂ. ಮೊತ್ತವನ್ನೂ ವಸೂಲಿ ಮಾಡಿದ್ದರು.
ಮನೆಯಲ್ಲಿ ಸಂಬಂಧಿಕರು ಬಂದು ಸೇರಿದ್ದು, ಕುಂಟಂಗೇರಡ್ಕದ ಸ್ಮಶಾನದಲ್ಲಿ ಶವಸಂಸ್ಕಾರಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಈ ಮಧ್ಯೆ ರಾಮನಾಥ ಗಟ್ಟಿ ಅವರ ಶರೀರದಲ್ಲಿ ಚಲನಾಶಕ್ತಿ ಕಂಡುಬಂದಿರುವುದನ್ನು ಸಂಬಂಧಿಕರು ಗಮನಿಸಿದ್ದು, ತಕ್ಷಣ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ಮುಂದುವರಿದಿದೆ. ಜೀವಂತ ವ್ಯಕ್ತಿಯನ್ನು ಮೃತಪಟ್ಟಿರುವುದಾಗಿ ಘೋಷಿಸಿದ ದೇರಳಕಟ್ಟೆ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಜನತೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.




