ಪೆರ್ಲ: ಮಹಿಳೆಯರ ಅಭಿವೃದ್ಧಿ ಸಾಮಾಜಿಕ ಪುರೋಗತಿಗೆ ಸಹಕಾರಿಯಾಗುವುದಾಗಿ ಕೇರಳ ವಿಧಾನಸಭಾ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ತಿಳಿಸಿದ್ದಾರೆ.
ಅವರು ಎಣ್ಮಕಜೆ ಗ್ರಾಮ ಗ್ರಾಮ ಪಂಚಾಯಿತಿ ವತಿಯಿಂದ ಪೆರ್ಲ ಪೇಟೆಯಲ್ಲಿ ನಿರ್ಮಿಸಿರುವ ಮಹಿಳಾ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಸ್ವಾವಲಂಬಿಯಾದಾಗ ಪ್ರತಿಯೊಂದು ಕ್ಷೇತ್ರವೂ ಅಭಿವೃದ್ಧಿಕಾಣಲು ಸಾಧ್ಯ. ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಶಸ್ತ್ರೀಕರಣಗೊಳಿಸುವಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿ ನಡೆಸುತ್ತಿರುವ ಯೋಜನೆಗಳು ಶ್ಲಾಘನೀಯ ಎಂದು ತಿಳಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಂಗ್ರೆಸ್ ಮುಖಮಡ ಕೆ. ನೀಲಕಂಠನ್, ಎಣ್ಮಕಜೆ ಗ್ರಾಪಂ ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಿ.ಎಸ್ ಗಾಂಭೀರ್, ಜಯಶ್ರೀ ಕುಳಾಲ್, ಗ್ರಾಪಂ ಸದಸ್ಯರಾದ ಮಹೇಶ್ ಭಟ್, ರಾಮಚಂದ್ರ, ನರಸಿಂಹ ಪೂಜಾರಿ, ಡಾ.ಜಹನಾಝ್ ಹಂಸಾರ್, ರಾಧಾಕೃಷ್ಣ ನಾಯಕ್, ಕೇರಳ ರಾಜ್ಯ ಸಣ್ಣ ಕೈಗಾರಿಕಾ ಅಸೋಸಿಯೇಶನ್ ರಾಜ್ಯ ಸಮಿತಿ ಸದಸ್ಯ ರಾಜಾರಾಮ ಎಸ್. ಪೆರ್ಲ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಎಸ್‍ಸಿ-ಎಸ್‍ಟಿ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಸ್ವಾಗತಿಸಿದರು. ಗ್ರಾಪಂ ಕಾರ್ಯದರ್ಶಿ ಶಾನವಾಸ್ ವಂದಿಸಿದರು.
ಮದ್ಯಪಾನ ಕಡಿತಗೊಳಿಸಲು ಬೆಲೆಯೇರಿಕೆ ಪರಿಹಾರವಲ್ಲ....:
ಮದ್ಯ ಬೆಲೆ ಹೆಚ್ಚಳದಿಂದ ಮದ್ಯಪಾನಿಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ಕೇರಳ ಸರ್ಕಾರ ಮದ್ಯ ಬೆಲೆ ಹೆಚ್ಚಿಸಿರುವ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿವರಣೆ ನೀಡಿದರು. ಮದ್ಯದ ಬೆಲೆ ಹೆಚ್ಚಿಸಿದ ಮರುದಿನ ಕುಡಿತ ಕಡಿಮೆ ಮಾಡುವುದರ ಬದಲು, ಮತ್ತೊಂದು ಹೆಚ್ಚಿನ ಪೆಗ್ ಸೇವಿಸುವವರೇ ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಸರ್ಕಾರದ ಮದ್ಯನೀತಿಯಿಂದ ಮಹಿಳೆಯರು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದ್ದಾರೆ.


