ಬದಿಯಡ್ಕ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕುಂಬಳೆ ವಲಯ ಸಮ್ಮೇಳನ ಸೂರಂಬೈಲು ಕೋಓಪರೇಟಿವ್ ಬ್ಯಾಂಕ್‍ನ ಸಮನ್ವಯ ಸಭಾಂಗಣದ `ಚಿದಾನಂದ ನಗರಿ'ಯಲ್ಲಿ ಮಂಗಳವಾರ ಜರಗಿತು. ಎಕೆಪಿಎ ಜಿಲ್ಲಾ ಕಾರ್ಯದರ್ಶಿ ಹರೀಶ್ ಪಾಲಕುನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಆಧುನಿಕ ಯುಗದಲ್ಲಿ ಛಾಯಾಗ್ರಹಣ ರಂಗವು ಅನೇಕ ಬದಲಾವಣೆಗಳನ್ನು ಕಂಡಿದೆ. ಎಐ ತಂತ್ರಜ್ಞಾನದ ಸವಾಲಿನೊಂದಿಗೆ ಮುಂದುವರಿಯಬೇಕಾಗಿದೆ. ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸುವುದರೊಂದಿಗೆ ಛಾಯಾಗ್ರಾಹಕ ಸದಸ್ಯರು ಪ್ರಗತಿಯನ್ನು ಸಾಧಿಸಬೇಕು ಎಂದು ತಿಳಿಸಿದ ಅವರು ಸಂಘಟನೆಯು ಸದಸ್ಯರ ಅನುಕೂಲಕ್ಕಾಗಿ ಅನೇಕ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕೆಂದರು.
ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ, ಕಾರ್ಯದರ್ಶಿ ರಾಜೆಂದ್ರನ್, ಕೋಶಾಧಿಕಾರಿ ಪ್ರಜಿತ್ ಕಾಞಂಗಾಡು, ಉಪಾಧ್ಯಕ್ಷ ವೇಣು ವಿ.ವಿ., ಜಿಲ್ಲಾ ವೆಲ್ಪೇರ್ ಸಮಿತಿ ಸಂಚಾಲಕ ವಿಜಯನ್ ಶೃಂಗಾರ್, ಜಿಲ್ಲಾಸಮಿತಿ ಸದಸ್ಯ ನಿತ್ಯಪ್ರಸಾದ್ ಕುಂಬಳೆ ಶುಭ ಹಾರೈಸಿ ಮಾತನಾಡಿದರು. ಈ ಸಂದರ್ಭದಲ್ಲಿ ಛಾಯಾಗ್ರಹಣ ವೃತ್ತಿಯೊಂದಿಗೆ ಹೈನುಗಾರಿಕೆಯಲ್ಲಿ ವಿಶೇಷ ಸಾಧನೆಗೈದ ಶ್ರೀಕೃಷ್ಣ ಭಟ್ ಪೆರ್ಲ ಹಾಗೂ ಕೃಷಿಯಲ್ಲಿ ವಿಶೇಷ ಸಾಧನೆಗೈದ ಹರೀಶ್ ಆಳ್ವ ಅವರನ್ನು ಸನ್ಮಾನಿಸಲಾಯಿತು. ಕುಂಬಳೆ ವಲಯ ಉಸ್ತುವಾರಿ ಸುೀರ್ ಕಾಞಂಗಾಡು ಅವರನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಸುರೇಶ್ ಆಚಾರ್ಯ ಸ್ವಾಗತಿಸಿದರು. ಜೊತೆಕಾರ್ಯದರ್ಶಿ ನವೀನ್ ಕುಂಬಳೆ ಶ್ರದ್ಧಾಂಜಲಿ ಅರ್ಪಿಸಿದರು. ಬದಿಯಡ್ಕ ಘಟಕ ಕಾರ್ಯದರ್ಶಿ ನಾರಾಯಣ ವಿ. ಪ್ರಾರ್ಥನೆ ಹಾಡಿದರು.
ಪ್ರತಿನಿಧಿ ಸಮ್ಮೇಳನ :
ಅಪರಾಹ್ನ ನಡೆದ ಪ್ರತಿನಿಧಿ ಸಮ್ಮೇಳನವನ್ನು ಜಿಲ್ಲಾ ಅಧ್ಯಕ್ಷ ಸುಗುಣನ್ ಇರಿಯ ಉದ್ಘಾಟಿಸಿದರು. ವಲಯ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಜೆಂದ್ರನ್ ಜಿಲ್ಲಾ ವರದಿ, ಕಾರ್ಯದರ್ಶಿ ಸುರೇಶ್ ಆಚಾರ್ಯ ವಲಯ ವರದಿ ಹಾಗೂ ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು ಲೆಕ್ಕಪತ್ರ ಮಂಡಿಸಿದರು. ವಲಯ ಪಿಆರ್‍ಒ ಶ್ಯಾಮಪ್ರಸಾದ ಸರಳಿ ಸ್ವಾಗತಿಸಿ, ಉದಯಕುಮಾರ್ ಎಂ.ವಂದಿಸಿದರು. ಇದೇ ಸಂದರ್ಭದಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಕರೀಮ್, ಕಾರ್ಯದರ್ಶಿಯಾಗಿ ವೇಣುಗೋಪಾಲ ನೀರ್ಚಾಲು, ಕೋಶಾಧಿಕಾರಿಯಾಗಿ ನವೀನ್ ಕುಂಬಳೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರದೀಪ್, ಜೊತೆಕಾರ್ಯದರ್ಶಿಯಾಗಿ ಗಣೇಶ್, ಪಿ.ಆರ್.ಒ. ಆಗಿ ಸಂದೇಶ್ ಐಲ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಸುರೇಶ್ ಆಚಾರ್ಯ, ಅಪ್ಪಣ್ಣ ಸೀತಾಂಗೋಳಿ, ಸುನಿಲ್ ಕುಮಾರ್ ಅವರನ್ನು ಆರಿಸಲಾಯಿತು.


