ಕಾಸರಗೋಡು: ಪಡನ್ನದಲ್ಲಿ ಮಕ್ಕಳಿಲ್ಲದ ಮನೆಯಲ್ಲಿ ಏಕಾಏಕಿ ಮಗುವಿನ ಅಳು ಕೇಳಿಸಿಕೊಂಡಿರುವುದು ಸ್ಥಳೀಯ ಜನರಲ್ಲಿ ಅಚ್ಛರಿ ಹಾಗೂ ಕುತೂಹಲಕ್ಕೆ ಕಾರಣವಾಗಿ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಮಗುವಿನ ಸ್ವಂತ ತಾಯಿಯನ್ನು ಪತ್ತೆಹಚ್ಚಿ ಮಗುವನ್ನು ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಡನ್ನದ ಒಂದು ಮನೆಯಲ್ಲಿ 26ದಿವಸ ಪ್ರಾಯದ ಮಗು ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ದೂರಿನನ್ವಯ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ವಿಚಾರಿಸಿದಾಗ ಮಗುವಿನ ಪೂರ್ವ ವೃತ್ತಾಂತ ಬೆಳಕಿಗೆ ಬಂದಿದೆ. ಕಣ್ಣೂರು ಪಿಲಾತ್ತರದಲ್ಲಿ ಮಗುವಿನ ಜನನವಾಗಿದ್ದು, ಅನೈತಿಕ ಚಟುವಟಿಕೆಯಿಂದ ಮಗು ಜನಿಸಿತ್ತೆನ್ನಲಾಗಿದೆ. ವಿವಾಹಿತೆಯಾಗಿದ್ದರೂ, ಪತಿಯ ಹೊರತಾಗಿ ಬೇರೊಬ್ಬ ಪುರುಷನಿಗೆ ಈ ಮಗು ಹುಟ್ಟಿದ್ದು, ಆ ಮನೆಯಲ್ಲಿ ನಡೆಯಲಿದ್ದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನರು ಒಟ್ಟು ಸೇರುವುದರಿಂದ ಮಾನಕ್ಕೆ ಅಂಜಿ ಮಗುವನ್ನು ಬೇರೊಬ್ಬ ಮಹಿಳೆಯೊಂದಿಗೆ ಪಡನ್ನದ ಮನೆಯೊಂದಕ್ಕೆ ಸಾಗಿಸಿದ್ದಳು.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಗುವಿನ ಹೆತ್ತತಾಯಿಯನ್ನು ಪತ್ತೆಹಚ್ಚಿ ಮಗುವನ್ನು ಆಕೆಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಹೆತ್ತತಾಯಿ ಹಾಗೂ ಸಾಕು ತಾಯಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ಮಗುವಿನ ಬಗ್ಗೆ ಸ್ಥಳೀಯರು ನಿಗೂಢತೆ ವ್ಯಕ್ತಪಡಿಸಿದ್ದು, ಮಗುವನ್ನು ಮಾರಾಟಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರರಿಗೆ ಯಾವುದೇ ದೂರು ಲಭಿಸದಿರುವುದರಿಂದ ಸಮಗ್ರ ತನಿಖೆಯೂ ಸವಾಲಾಗಿದೆ.

