ಶಿಮ್ಲಾ: ಹಿಮಾಚಲ ಪ್ರದೇಶದಿಂದ ವೈದ್ಯಕೀಯ ವಿಸ್ಮಯ ಘಟನೆಯೊಂದು ವರದಿಯಾಗಿದ್ದು, ತಮ್ಮ 16ನೇ ವಯಸ್ಸಿನಲ್ಲಿ ತಲೆಗೆ ಪೆಟ್ಟು ಬಿದ್ದು ನೆನಪಿನ ಶಕ್ತಿ ಕಳೆದುಕೊಂಡಿದ್ದ ಬಾಲಕನೊಬ್ಬ, ದಶಕಗಳ ಬಳಿಕ ತಲೆಗೆ ಬಿದ್ದ ಮತ್ತೊಂದು ಪೆಟ್ಟಿನಿಂದ ತಮ್ಮ 61ನೇ ವಯಸ್ಸಿನಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಸೇರಿರುವ ಸಿನಿಮೀಯ ಘಟನೆ ನಡೆದಿದೆ.
ಆಗ ರಿಖಿ ಆಗಿದ್ದ, ಇದೀಗ ರವಿ ಚೌಧರಿ ಆಗಿರುವ ವ್ಯಕ್ತಿಯು 45 ವರ್ಷದ ಬಳಿಕ ಸಿರ್ಮೌರ್ ಜಿಲ್ಲೆಯಲ್ಲಿನ ತಮ್ಮ ಸ್ವಗ್ರಾಮ ನಾಡಿಗೆ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಕಳೆದ ವಾರ ಮರಳಿದ್ದಾರೆ. ತಮ್ಮ ಮಧ್ಯ ವಯಸ್ಸಿನಲ್ಲಿ ಅವರು ಮನೆಗೆ ಮರಳುತ್ತಾರೆ ಎಂದು ಅವರ ಕುಟುಂಬದ ಸದಸ್ಯರೂ ಭಾವಿಸಿರಲಿಲ್ಲವೇನೊ!
ರಿಖಿಯನ್ನು ಗ್ರಾಮಸ್ಥರು ಪುಷ್ಪಾರ್ಚನೆ, ಸಂಗೀತ ಹಾಗೂ ಕಣ್ಣೀರಿನೊಂದಿಗೆ ತಮ್ಮ ಗ್ರಾಮಕ್ಕೆ ಸ್ವಾಗತಿಸಿದರು. ಈ ವೇಳೆ ತಮ್ಮ ಸಹೋದರನನ್ನು ನೋಡುತ್ತಿದ್ದಂತೆಯೇ ಅವರ ಒಡಹುಟ್ಟಿದವರಾದ ದುರ್ಗಾ ರಾಮ್, ಚಂದರ್ ಮೋಹನ್, ಚಂದ್ರಮಣಿ, ಕೌಶಲ್ಯ ದೇವಿ, ಕಲಾ ದೇವಿ ಹಾಗೂ ಸುಮಿತ್ರ ದೇವಿ ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತರು. ಜೀವಂತ ಶವವಾಗಿದ್ದ ರಿಖಿಯನ್ನು ಅವರು ಇಷ್ಟು ವರ್ಷಗಳ ಕಾಲ ಮರೆತೇ ಬಿಟ್ಟಿದ್ದರು ಎಂದು ನಾಡಿ ಗ್ರಾಮದ ನಿವಾಸಿ ರುದ್ರ ಶರ್ಮ ಹೇಳುತ್ತಾರೆ.
"ಇಂತಹ ಘಟನೆಗಳು ತುಂಬಾ ಅಪರೂಪ. ಕುಟುಂಬದಲ್ಲಿ ಹಾಗೂ ಗ್ರಾಮದಲ್ಲಿ ಸಾಕಷ್ಟು ಸಂಭ್ರಮ ಮನೆ ಮಾಡಿದೆ" ಎನ್ನುತ್ತಾರೆ ಅವರು.
1980ರಲ್ಲಿ ಅಂಬಾಲಕ್ಕೆ ಪ್ರವಾಸ ತೆರಳಿದ್ದಾಗ, ಹರ್ಯಾಣದ ಯಮುನಾನಗರ್ ನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಿಖಿ ದೊಡ್ಡ ರಸ್ತೆ ಅಪಘಾತಕ್ಕೆ ಈಡಾಗಿದ್ದರು. ಆಗ ಅವರ ತಲೆಗೆ ಅದೆಂತಹ ಪೆಟ್ಟಾಗಿತ್ತೆಂದರೆ, ಅವರು ತಮ್ಮ ಹೆಸರು ಮತ್ತು ಗುರುತು ಸೇರಿದಂತೆ ಸಂಪೂರ್ಣ ನೆನಪಿನ ಶಕ್ತಿ ಕಳೆದುಕೊಂಡಿದ್ದರು ಎಂದು ರುದ್ರ ಶರ್ಮ ಸ್ಮರಿಸುತ್ತಾರೆ. ಬಳಿಕ, ಅವರ ಸ್ನೇಹಿತರೊಬ್ಬರು ಅವರಿಗೆ ರವಿ ಚೌಧರಿ ಎಂದು ಮರುನಾಮಕರಣ ಮಾಡಿದ್ದರು ಎನ್ನಲಾಗಿದೆ.
ಹಿಂದಿನ ಯಾವುದೇ ನೆನಪಿಲ್ಲದ ರಿಖಿ, ಬಳಿಕ ಮುಂಬೈಗೆ ತೆರಳಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸತೊಡಗಿದರು ಹಾಗೂ ಕಾಲೇಜೊಂದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಮಹಾರಾಷ್ಟ್ರದ ನಾಂದೇಡ್ ನಲ್ಲಿ ನೆಲೆಸಿದರು. ಬಳಿಕ ಸಂತೋಷಿ ಎಂಬುವವರನ್ನು ವಿವಾಹವಾದ ರಿಖಿಗೆ ಇದೀಗ ಮೂವರು ಮಕ್ಕಳಿದ್ದಾರೆ. ಈ ಪೈಕಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ ಎಂದು ರುದ್ರ ಶರ್ಮ ಹಾಗೂ ನಾಡಿಯ ಸ್ಥಳೀಯರು ತಿಳಿಸುತ್ತಾರೆ.
ಕೆಲ ತಿಂಗಳ ಹಿಂದೆ ಅವರ ತಲೆಗೆ ಆದ ಮತ್ತೊಂದು ಪೆಟ್ಟು, ಅವರ ಜೀವನವನ್ನು ಮತ್ತೆ ಬದಲಿಸಿದೆ. ನಾಡಿ ಗ್ರಾಮದಲ್ಲಿನ ಮಸುಕುಮಸುಕಾದ ಮಾವಿನ ಮರದ ಚಿತ್ರಗಳು, ಇಕ್ಕಟ್ಟಾದ ಬೀದಿಗಳು ಹಾಗೂ ಸತೌನ್ ನಲ್ಲಿನ ಮನೆಯೊಂದರ ಅಂಗಳ ಅವರ ಕನಸಿನಲ್ಲಿ ಬರತೊಡಗಿದೆ. ತಕ್ಷಣವೇ ರಿಖಿಗೆ ಇದು ಕನಸಲ್ಲ, ಬದಲಿಗೆ ನೆನಪುಗಳು ಎಂದು ಅರಿವಾಗಿದೆ ಎಂದು ಅವರು ಹೇಳುತ್ತಾರೆ.
ಬಳಿಕ ಸತೌನ್ ಅನ್ನು ಪತ್ತೆ ಹಚ್ಚಲು ಕಾಲೇಜು ವಿದ್ಯಾರ್ಥಿಯೊಬ್ಬರ ನೆರವನ್ನು ರಿಖಿ ಪಡೆದಿದ್ದಾರೆ. ಗೂಗಲ್ ನಲ್ಲಿ ನಾಡಿ ಗ್ರಾಮ ಹಾಗೂ ಸತೌನ್ ಅನ್ನು ಪತ್ತೆ ಹಚ್ಚುವಾಗ, ಅವರಿಗೆ ಕೆಫೆಯೊಂದರ ಫೋನ್ ನಂಬರ್ ಪತ್ತೆಯಾಗಿದೆ.
ಆ ಸಂಖ್ಯೆಗೆ ಕರೆ ಮಾಡಿರುವ ರಿಖಿ, ರುದ್ರಪ್ರಕಾಶ್ ಎಂಬ ಹೆಸರಿನ ಗ್ರಾಮದ ಹಿರಿಯ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಮುಂದುವರಿದಂತೆ, ರಿಖಿಯ ಸಂಬಂಧಿಕರಾದ ಎಂ.ಕೆ.ಚೌಧರಿ ಎಂಬುವವರು ಹಳೆಯ ನೆನಪುಗಳನ್ನು ತಂದುಕೊಂಡಿದ್ದು, ಅಂತಿಮವಾಗಿ ಅವರನ್ನು ನವೆಂಬರ್ 15ರಂದು ಕುಟುಂಬದ ಸದಸ್ಯರೊಂದಿಗೆ ಮರುಮಿಲನ ಮಾಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮಾನಸಿಕ ಆರೋಗ್ಯ ತಜ್ಞ ಡಾ. ಆದಿತ್ಯ ಶರ್ಮ, "ಯಾವುದೂ ಅಸಾಧ್ಯವಲ್ಲವಾದರೂ, ಪೆಟ್ಟಿನ ನಂತರ ನೆನಪು ಮರುಕಳಿಸುವ ಇಂತಹ ಘಟನೆಗಳನ್ನು ತೀರಾ ವಿರಳವಾಗಿ ದಾಖಲಿಸಲಾಗಿದೆ. ವೈದ್ಯಕೀಯ ಪರಿಶೀಲನೆ ಹಾಗೂ ಮಿದುಳಿನ ಸ್ಕ್ಯಾನ್ ನಂತರವಷ್ಟೇ ಇದರ ನಿಖರ ಕಾರಣ ತಿಳಿದು ಬರಲಿದೆ" ಎಂದು ಹೇಳಿದ್ದಾರೆ.




