ಮೀರತ್: ನಮ್ಮ ಆಕ್ಷೇಪಣೆಯ ಹೊರತಾಗಿಯೂ ಆಸ್ಪತ್ರೆಯ ತುರ್ತು ಘಟಕದ ಸಿಬ್ಬಂದಿಗಳು ನಮ್ಮ ಎರಡೂವರೆ ವರ್ಷದ ಗಂಡು ಮಗುವಿನ ಗಾಯದಿಂದ ಸೋರುತ್ತಿದ್ದ ರಕ್ತವನ್ನು ತಡೆಯಲು ಫೆವಿಕ್ವಿಕ್ ಹಾಕಿದ್ದಾರೆ ಎಂದು ಮಗುವಿನ ಕುಟುಂಬದ ಸದಸ್ಯರು ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ, ಮೀರತ್ ನ ಖಾಸಗಿ ಆಸ್ಪತ್ರೆಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಈ ದೂರಿನ ಬೆನ್ನಿಗೇ, ಘಟನೆಯ ಕುರಿತು ತನಿಖೆ ನಡೆಸಲು ಮೀರತ್ ನ ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ದ್ವಿಸದಸ್ಯ ತನಿಖಾ ಸಮಿತಿಯನ್ನು ರಚಿಸಿದ್ದಾರೆ.
ಸೋಮವಾರ ತಡ ರಾತ್ರಿ ಮೀರತ್ ನ ಜಾಗೃತಿ ವಿಹಾರ್ ಬಡಾವಣೆಯ ನಿವಾಸಿ ಜಸ್ಪ್ರಿಂದರ್ ಸಿಂಗ್ ಎಂಬುವವರ ಪುತ್ರ ಮನ್ರಾಜ್ ತನ್ನ ತಲೆಯನ್ನು ಮೇಜೊಂದಕ್ಕೆ ಬಡಿದುಕೊಂಡಿದ್ದರಿಂದ, ತಲೆಯಿಂದ ರಕ್ತ ಸೋರಲು ಪ್ರಾರಂಭಿಸಿತು. ಆಗ ತಕ್ಷಣವೇ ಆತನನ್ನು ಭಾಗ್ಯಶ್ರೀ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ವೇಳೆ ತುರ್ತು ಘಟಕದಲ್ಲಿ ಯಾವುದೇ ವೈದ್ಯರಿರಲಿಲ್ಲ. ಅಲ್ಲಿ ಹಾಜರಿದ್ದ ವಾರ್ಡ್ ಬಾಯ್ ಒಬ್ಬ ನಮ್ಮ ಆಕ್ಷೇಪದ ಹೊರತಾಗಿಯೂ ಗಾಯಕ್ಕೆ ಹಚ್ಚಲು ಫೆವಿಕ್ವಿಕ್ ತರುವಂತೆ ಯಾರಿಗೋ ಸೂಚಿಸಿದರು ಎಂದು ಮಗುವಿನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಮಗುವಿಗೆ ಟೆಟಾನಸ್ ಚುಚ್ಚುಮದ್ದು ನೀಡಲೂ ಆಸ್ಪತ್ರೆಯ ಸಿಬ್ಬಂದಿಗಳು ನಿರಾಕರಿಸಿದರು ಎಂದು ಅವರು ದೂರಿದ್ದಾರೆ.
ಮರುದಿನ ಬೆಳಗ್ಗೆ ಪೋಷಕರು ತಮ್ಮ ಮಗುವನ್ನು ಲೋಕ್ ಪ್ರಿಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಮಗುವಿನ ಗಾಯವನ್ನು ಸ್ವಚ್ಛಗೊಳಿಸಿ, ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮೀರತ್ ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ, "ಘಟನೆಯ ಕುರಿತು ತನಿಖೆ ನಡೆಸಲು ದ್ವಿಸದಸ್ಯ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ತನಿಖೆಗೆ ಚಾಲನೆ ನೀಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.




