ಕಾಸರಗೋಡು: ನಗರದ ರೈಲು ನಿಲ್ದಾಣದಿಂದ ಕರಂದಕ್ಕಾಡು ಹಾದಿಯಾಗಿ ಮಧೂರು ಸಂಚರಿಸುವ ರಸ್ತೆ ಸಂಪೂರ್ಣ ಶಿಥಿಲವಸ್ಥೆಯಲ್ಲಿದ್ದು, ವಾಹನಗಳ ಸಂಚಾರ ದುಸ್ತರವೆನಿಸಿದೆ. ರಸ್ತೆ ಶಿಥಿಲಾವಸ್ಥೆ ಮನಗಂಡು ನಡೆಸಿದ ತೇಪೆಹಚ್ಚುವ ಕಾರ್ಯ ಕೈಗೆತ್ತಿಕೊಂಡ ನಂತರ ರಸ್ತೆ ಮತ್ತಷ್ಟು ಹೊಂಡ ಬಿದ್ದಿದೆ. ಆಟೋರಿಕ್ಷಾ ಹಾಗೂ ದ್ವಿಚಕ್ರವಾಹನ ಸವಾರರ ಪಾಲಿಗೆ ರೈಲ್ವೆ ನಿಲ್ದಾಣದಿಂದ ಕರಂದಕ್ಕಾಡು ಸಂಚರಿಸುವ ರಸ್ತೆ ನರಕಸದೃಶವಾಗುತ್ತಿದೆ.
ರಸ್ತೆ ಡಾಂಬರೀಕರಣ ಆರಂಭಿಸಲಾಗಿದ್ದರೂ, ಮಳೆಗಾಲದ ನೆಪವೊಡ್ಡಿ ಸ್ಥಗಿತಗೊಳಿಸಿದ್ದ ಕಾಮಗಾರಿ ಇನ್ನೂ ಪುನರಾರಂಭಗೊಂಡಿಲ್ಲ. ಈ ಬಗ್ಗೆ ವಿವಿಧ ಸಂಘಟನೆಗಳು ಸಂಬಂಧಪಟ್ಟ ಅಧಿಕಾರಿಗಳನ್ನು ಹಲವು ಬಾರಿ ಸಂಪರ್ಕಿಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಳೆ ಕಡಿಮೆಯಾದ ತಕ್ಷಣ ರಸ್ತೆ ಡಾಂಬರೀಕರಣ ನಡೆಸುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಭರವಸೆ ಸುಳ್ಳಾಗಿದೆ. ರೈಲ್ವೆ ನಿಲ್ದಾಣದಿಂದ ಪಳ್ಳಂ ಜಂಕ್ಷನ್, ಮಲ್ಲಿಕಾರ್ಝುನ ದೇವಸ್ಥಾನ, ಬ್ಯಾಂಕ್ ರಸ್ತೆ, ಕರಂದಕ್ಕಾಡು ಪ್ರದೇಶದಲ್ಲಿ ಬೃಃತ್ ಹೊಂಡಗಳುಂಟಾಗಿದೆ. ಮಳೆ ಅಲ್ಪ ಕಡಿಮೆಯಾಗುತ್ತಿದ್ದಂತೆ ಇಲ್ಲಿ ಧೂಳಿನ ಸಮಸ್ಯೆಯಿಂದ ಪೇಟೆ ಜನತೆ ಸಂಕಷ್ಟ ಎದುರಿಸಬೇಕಾಗುತ್ತಿದೆ. ರಸ್ತೆ ಹೊಂಡ ತಪ್ಪಿಸುವ ಭರದಲ್ಲಿ ಹಿಂದಿನಿಂದ ಆಗಮಿಸುವ ವಾಹನಗಳು ಡಿಕ್ಕಿಯಾಗುತ್ತಿದೆ. ಶಿಥಿಲಗೊಂಡ ರಸ್ತೆಯಲ್ಲಿ ನಿರಂತರ ಟ್ರಾಫಿಕ್ ಜಾಮ್ ನಡೆಯುತ್ತಿರುವುದರಿಂದ ನಿಗದಿತ ಸಮಯಕ್ಕೆ ಬಸ್ಸುಗಳಿಗೆ ತಲುಪಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೊಸ ಬಸ್ ನಿಲ್ದಾಣದಿಂದ ಹಳೇ ಬಸ್ ನಿಲ್ದಾಣ ತಲುಪುವ ಖಾಸಗಿ ಬಸ್‍ಗಳು ಪಳ್ಳಂಜಂಕ್ಷನ್, ಬ್ಯಾಂಕ್ ರಸ್ತೆ ಮೂಲಕ ಸುತ್ತುಬಳಸಿ ಹೊಸ ಬಸ್‍ನಿಲ್ದಾಣ ತಲುಪಬೇಕಾಗಿದ್ದು, ಶಿಥಿಲರಸ್ತೆಯಿಂದ ಸಂಚಾರ ಮತ್ತಷ್ಟು ವಿಳಂಬವಾಗುತ್ತಿದೆ.
ಪ್ರಾಚೀನ ದೇಗುಲರಸ್ತೆ ಹಾದಿಯೂ ಶಿಥಿಲ:
ಇತಿಹಾಸಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕಾಸರಗೋಡು ಪೇಟೆಯಿಂದ ತೆರಳಬೇಕಾದರೆ ಇದೇ ರಸ್ತೆಮೂಲಕ ಸಾಗಬೇಕು. ಕರಂದಕ್ಕಾಡು, ಮೀಪುಗುರಿ, ಕೂಡ್ಲು, ಪಾರೆಕಟ್ಟ ಪ್ರದೇಶದಲ್ಲಿ ರಸ್ತೆ ಹೆಚ್ಚು ಹಾನಿಗೀಡಾಗಿದ್ದು, ರಾಜ್ಯ ಮುಜರಾಯಿ ಇಲಾಖೆ ಅಧೀನದಲ್ಲಿರುವ ಪ್ರತಿಷ್ಠಿತ ದೇವಾಲಯದ ಹಾದಿ ಭಕ್ತರಪಾಲಿಗೆ ನರಕಯಾತನೆ ಕಾರಣವಾಗುತ್ತಿದೆ.
ಬಸ್ ಸಂಚಾರ ಸ್ಥಗಿತಕ್ಕೆ ತೀರ್ಮಾನ:
ರಸ್ತೆ ಶಿಥಿಲಾವಸ್ಥೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಹಳೇ ಬಸ್ ನಿಲ್ದಾಣ ಮೂಲಕ ಬ್ಯಾಂಕ್ ರಸ್ತೆ ಹಾದಿಯಾಗಿ ಸಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಖಾಸಗಿ ಬಸ್ ಮಾಲಿಕರ ಹಾಗೂ ಕಾರ್ಮಿಕರ ಸಂಘಟನೆ ಎಚ್ಚರಿಕೆ ನೀಡಿದೆ. ಬಸ್ ಉದ್ದಿಮೆ ನಷ್ಟದಿಂದ ಸಾಗುತ್ತಿದ್ದು, ಈ ಮಧ್ಯೆ ಶಿಥಿಲ ರಸ್ತೆಯಿಂದ ಬಸ್‍ಗಳಿಗೆ ಹೆಚ್ಚಿನ ಇಂಧನ ಖರ್ಚಾಗುತ್ತಿದೆ. ಜತೆಗೆ ಬಿಡಿಭಾಗಗಳೂ ಕಳಚಿಕೊಳ್ಳುತ್ತಿದ್ದು, ಹೆಚ್ಚಿನ ಹೊರೆಯಾಗುತ್ತಿರುವುದಾಗಿ ಬಸ್ ಮಾಲಿಕರು ತಿಳಿಸುತ್ತಾರೆ.
ಅಭಿಮತ:
ಖಾಸಗಿ ಬಸ್ ಉದ್ದಿಮೆ ಸಂಕಷ್ಟದಲ್ಲಿದ್ದು, ಈ ಮಧ್ಯೆ ರಸ್ತೆ ದುರಸ್ತಿಕಾರ್ಯ ನಡೆಸದಿರುವುದರಿಂದ ಮತ್ತಷ್ಟು ಸಮಸ್ಯೆ ಎದುರಾಗುತ್ತಿದೆ. ಕಾಸರಗೋಡು ರೈಲ್ವೆ ನಿಲ್ದಾಣದಿಂದ ಬ್ಯಾಂಕ್‍ರಸ್ತೆ, ಕರಂದಕ್ಕಾಡು ಸಂಚರಿಸುವ ರಸ್ತೆಯನ್ನು ನ. 30ರೊಳಗೆ ದುರಸ್ತಿಪಡಿಸದಿದ್ದಲ್ಲಿ ಡಿ. 1ರಿಂದ ಈ ಹಾದಿಯಾಗಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು. ಎಲ್ಲಾ ಖಾಸಗಿ ಬಸ್‍ಗಳು ಹೊಸ ಬಸ್ ನಿಲ್ದಾಣ ವರೆಗೆ ಮಾತ್ರ ಸಂಚಾರ ನಿಗದಿಪಡಿಸಬೇಕಾಗುತ್ತದೆ.
ಮಧುಸೂದನನ್ ಬಿ.ಸಿ ಅಧ್ಯಕ್ಷ
ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್






