ಉಪ್ಪಳ: ಮಂಗಲ್ಪಾಡಿ ಪಂಚಾಯತಿಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಚಾಯತಿಯ 24ನೇ ವಾರ್ಡ್ ಮಣಿಮುಂಡದಲ್ಲಿ ಲೀಗ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮೀನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವಾರ್ಡ್‍ನಲ್ಲಿ ಅವರಿಗೆ ಪ್ರತಿಸ್ಪರ್ಧಿಗಳು ಯಾರೂ ಇಲ್ಲದುದರಿಂದ ಸಮೀನರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂಲೀಗ್ ಅಭ್ಯರ್ಥಿ ಪರಾಭವಗೊಂಡಿದ್ದ ಈ ವಾರ್ಡ್‍ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಸಮಾನ ಶಕ್ತಿ ಹೊಂದಿರುವುದಾಗಿ ಹೇಳಲಾಗುತ್ತಿದೆ. ಸಮೀನ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆಯಾಗಿದ್ದರು. ನಾಮಪತ್ರಿಕೆ ಸಲ್ಲಿಸಬೇಕಾದ ಕೊನೆಯ ದಿನವಾದ ಶುಕ್ರವಾರದ ವರೆಗೆ ಸಮೀನ ಹಾಗೂ ಡಮ್ಮಿ ಮಾತ್ರವೇ ನಾಮಪತ್ರಿಕೆ ಸಲ್ಲಿಸಿದ್ದರು.
ಮಲಪಟ್ಟಂ ಗ್ರಾಮ ಪಂಚಾಯತಿ ಮತ್ತು ಅಂತೂರ್ ನಗರಸಭೆಯಲ್ಲಿ ಎಲ್‍ಡಿಎಫ್ ಅಭ್ಯರ್ಥಿಗಳಿಗೆ ಪ್ರತಿ ಸ್ಪರ್ಧಿಗಳೇ ಇಲ್ಲ!
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಮಯ ಶುಕ್ರವಾರ ಸಂಜೆ ಕೊನೆಗೊಂಡಿದ್ದು, ಕಣ್ಣೂರಿನ ಮಲಪಟ್ಟಂ ಗ್ರಾಮ ಪಂಚಾಯತಿ ಮತ್ತು ಅಂತೂರ್ ನಗರಸಭೆಯಲ್ಲಿ ಎಲ್‍ಡಿಎಫ್ ಅಭ್ಯರ್ಥಿಗಳಿಗೆ ಯಾವುದೇ ಪ್ರತಿಸ್ಪರ್ಧಿಗಳಿರಲಿಲ್ಲ. ವಾರ್ಡ್ 5, ಆಡುವಪ್ಪುರಂ ಉತ್ತರದಲ್ಲಿ ಎಲ್‍ಡಿಎಫ್ ಅಭ್ಯರ್ಥಿ ಐ.ವಿ. ಒತೆನನ್ ಮತ್ತು ಮಲಪಟ್ಟಂ ಪಂಚಾಯತಿಯ ವಾರ್ಡ್ 6 ರಲ್ಲಿ ಸಿ.ಕೆ. ಶ್ರೇಯಾ ವಿರುದ್ಧ ಸ್ಪರ್ಧಿಸಲು ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ.
ಅಂತೂರು ನರಸಭೆಯ, ಮೊರಾಜ ವಾರ್ಡ್‍ನಲ್ಲಿ ಕೆ. ರಜಿತಾ ಮತ್ತು ಪೊಡಿಕುಂಡು ವಾರ್ಡ್‍ನಲ್ಲಿ ಕೆ. ಪ್ರೇಮರಾಜನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತೂರು ಆಡಳಿತಾರೂಢ ಎಲ್‍ಡಿಎಫ್‍ಗೆ ವಿರೋಧವಿಲ್ಲದ ನಗರಸಭೆಯಾಗಿದೆ. ಮಲಪಟ್ಟಂ ಗ್ರಾಮ ಪಂಚಾಯತಿ ಸಿಪಿಎಂ ಭದ್ರಕೋಟೆಯಾಗಿದೆ. ಮೇ ತಿಂಗಳಲ್ಲಿ ಕಾಂಗ್ರೆಸ್ ನಿರ್ಮಿಸಿದ ಗಾಂಧಿ ಸ್ತೂಪವನ್ನು ಕೆಡವಿದ ನಂತರ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು.





