ಕಾಸರಗೋಡು: ಮಧೂರು ಸನಿಹದ ಉಳಿಯತ್ತಡ್ಕದಲ್ಲಿಕೋಮು ಗಲಭೆ ಸೃಷ್ಟಿಸಲು ಸಂಚು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 50ಮಂದಿ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಸ್ವ ಇಚ್ಛೆಯಿಂದ ಕೇಸು ದಾಖಲಿಸಿಕೊಂಡಿದ್ದಾರೆ.
ಮಧೂರು ಗ್ರಾಮ ಪಮಚಾಯಿತಿ ಕಚೇರಿ ವಠಾರದಲ್ಲಿಶುಕ್ರವಾರ ಶುಚಿತ್ವ ಮಿಶನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ತಂಡವೊಂದು ಬುಡಮೇಲುಗೊಳಿಸಲು ಯತ್ನಿಸಿದೆ. ಧ್ವನಿವರ್ಧಕದ ಮೂಲಕ ಶುಚಿತ್ವದ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡುವ ಕಾರ್ಯಕ್ರಮ ಇದಾಗಿದ್ದು, ಸ್ಥಳಕ್ಕಾಗಮಿಸಿದ ತಂಡವೊಂದು, ಇದು ಬಿಜೆಪಿ ಪಕ್ಷದ ಕಾರ್ಯಕ್ರಮ ಎಂದು ತಪ್ಪಾಗಿ ಭಾವಿಸಿ ಅಡಚಣೆ ಉಂಟುಮಾಡಿದೆ. ಅಧಿಕಾರಿಗಳು ಮನವರಿಕೆ ಮಾಡಿದರೂ, ಕೇಳಿಸಿಕೊಳ್ಳದ ತಂಡ ದಾಂಧಲೆ ನಡೆಸಿದೆ. ನೂಕುನುಗ್ಗಲಿನಿಂದ ಪರಿಸ್ಥಿತಿ ಕೈಮೀರುವುದನ್ನು ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪೊಲೀಸರು, ಹಲವರನ್ನು ವಶಕ್ಕೆ ತೆಗೆದು ಇವರ ವಿರುದ್ಧ ಕೋಮು ಸೌಹಾರ್ದತೆ ಕೆಡಿಸಲು ಸಂಚು ನಡೆಸಿರುವ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.




