ಕಾಸರಗೋಡು: ಜಿಲ್ಲೆಯ ಜನತೆಯ ಹಲವು ವರ್ಷಗಳ ಬೇಡಿಕೆಯಾಗಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ(ಎಐಐಎಂಎಸ್)ಸಂಸ್ಥೆ ಕಾಸರಗೋಡಿಗೆ ಮಂಜೂರಾಗಿ ಲಭಿಸುವ ನಿಟ್ಟಿನಲ್ಲಿ ಹೋರಾಟ ಚುರುಕುಗೊಳಿಸಲು 'ಏಮ್ಸ್ ಜನಪರ ಹೋರಾಟ ಸಮಿತಿ' ತೀರ್ಮಾನಿಸಿರುವುದಾಗಿ ಸಮಿತಿ ಉಪಾಧ್ಯಕ್ಷ ವಕೀಲ ಕೆ.ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಞಂಗಾಡಿನಲ್ಲಿ ಸಮಿತಿಯ ಜನಪರ ಸಮಾವೇಶದಲ್ಲಿ ಕೈಗೊಳ್ಳಲಾಗಿರುವ ತೀರ್ಮಾನಗಳನ್ನು ತ್ವರಿತಗೊಳಿಸುವುದರ ಜತೆಗೆ ತಳಮಟ್ಟದಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಹೋರಾಟ ಬಲಪಡಿಸಲಾಗುವುದು. ಹೋರಾಟದ ಮುಂದುವರಿಕೆಯಾಗಿ ಪಂಚಾಯಿತಿ ಮಟ್ಟದಲ್ಲಿ ಹೋರಾಟ ಆರಂಭಿಸಲಾಗುವುದು. ನಂತರ ಜಿಲ್ಲೆಯ ಎಲ್ಲ ಜನತೆಯನ್ನು ಒಟ್ಟುಸೇರಿಸಿ ಜನಪರ ಸಮಾವೇಶ ಹಮ್ಮಿಕೊಳ್ಳಲಾಗುವುದು. ಹೋರಾಟದಲ್ಲಿ ರಾಜಕೀಯ ಪಕ್ಷಗಳು, ಸಾಮಾಜಿಕ-ಸಾಂಸ್ಕøತಿಕ ಸಂಘಟನೆಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಸ್ತರದವರನ್ನೂ ಒಟ್ಟು ಸೇರಿಸಲಾಗುವುದು.
ರಾಜಕೀಯ ಪಕ್ಷಗಳು ನಿಲುವು ವ್ಯಕ್ತಪಡಿಸಲಿ:
ಏಮ್ಸ್ ಕಾಸರಗೋಡಿಗೆ ಮಂಜೂರಾಗಿ ಲಭಿಸುವ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ನಿಲುವು ವ್ಯಕ್ತಪಡಿಸಬೇಕು. ಜಿಲ್ಲೆಯ ಜನತೆಯ ಕಾನೂನುಬದ್ಧ ಹೋರಾಟವನ್ನು ರಾಜಕೀಯಾತೀತವಾಗಿ ಪರಿಗಣಿಸಿ ಬೆಂಬಲ ನೀಡಬೇಕು. ಜಿಲ್ಲೆಯ ಜನತೆಗೆ ಉನ್ನಮಟ್ಟದ ಆರೋಗ್ಯ ಸುರಕ್ಷಾ ವ್ಯವಸ್ಥೆ ಒದಗಿಸಿಕೊಡಲು ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಮುಖಂಡರು ಒಗ್ಗಟ್ಟು ಮೆರೆಯಬೇಕು. ತಪ್ಪಿದಲ್ಲಿ ಜನಪರ ಹೋರಾಟವನ್ನು ಮತ್ತಷ್ಟು ಬಲಪಡಿಸಿ ಮುಂದುವರಿಯಲಾಗುವುದು ಎಂದು ತಿಳಿಸಿದರು.
ಕಾಸರಗೋಡು ಸೂಕ್ತ:
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಸಂಕಷ್ಟ ನಿವಾರಿಸಲು ಹಾಗೂ ಆರೋಗ್ಯ, ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಕುಖ್ಯಾತಿಗೆ ಕಾರಣವಾಗಿರುವ ಕಾಸರಗೊಡು 'ಏಮ್ಸ್' ಸ್ಥಾಪನೆಗೆ ಸೂಕ್ತ ಸ್ಥಳವಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಜಿಲ್ಲೆಯ ಹೆಸರನ್ನು ಏಮ್ಸ್ ಬೇಡಿಕೆಯಲ್ಲಿರುವ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಜಿಲ್ಲೆಯಲ್ಲಿ 2ಸಾವಿರ ಎಕರೆಯಷ್ಟು ಖಾಲಿ ಭೂಮಿಯಿದ್ದು, ಏಮ್ಸ್ ಮಂಜೂರಾಗಿ ಲಭಿಸಿದಲ್ಲಿ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಸಂಸ್ಥೆ ಸ್ಥಾಪನೆಗೆ ಜಾಗ ಒದಗಿಸಿಕೊಡಲು ಸಹಾಯಕವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಶ್ರೀನಾಥ್ ಶಶಿ, ಎ. ಹಮೀದ್ ಹಾಜಿ, ಬಿ. ಪ್ರದೀಪ್ ಕುಮಾರ್, ಗಣೇಶನ್ ಅರರಮಂಗಾನ, ಮುರಳೀಧರನ್ ಪಡನ್ನಕ್ಕಾಡ್, ಸಲೀಂ ಚೌಕಿ ಉಪಸ್ಥೀತರಿದ್ದರು.




